ADVERTISEMENT

ದೆಹಲಿ: 2020ರಲ್ಲಿ 3,600 ಪಕ್ಷಿಗಳ ರಕ್ಷಣೆ

ದೆಹಲಿ ಅಗ್ನಿಶಾಮಕ ಸೇವೆಗಳ ಕಚೇರಿ ಮಾಹಿತಿ

ಪಿಟಿಐ
Published 17 ಜನವರಿ 2021, 14:41 IST
Last Updated 17 ಜನವರಿ 2021, 14:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಕಳೆದ ವರ್ಷ ವಿವಿಧೆಡೆ ನಡೆಸಿದ ಕಾರ್ಯಾಚರಣೆ ವೇಳೆ ಡಿಎಫ್‌ಎಸ್‌ ಸಿಬ್ಬಂದಿ 3,600 ಪಕ್ಷಿಗಳ ರಕ್ಷಣೆ ಮಾಡಿದ್ದಾರೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್‌) ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನದಂದು ಅತಿ ಹೆಚ್ಚು ಕರೆಗಳನ್ನು ಸ್ವೀಕರಿಸಲಾಗಿತ್ತು. ಆ ದಿನ ಜನರು ಗಾಳಿಪಟ ಹಾರಿಸುವ ಸಂಪ್ರದಾಯ ಇದೆ. ಗಾಳಿಪಟಕ್ಕೆ ಕಟ್ಟಿರುವ ದಾರ ಕೆಲವು ವೇಳೆ ಮರಗಳಿಗೆ, ವಿದ್ಯುತ್‌ ಕಂಬಗಳಿಗೆ ಸುತ್ತಿಕೊಳ್ಳುತ್ತವೆ. ಇಂಥ ದಾರಗಳೇ ಪಕ್ಷಿಗಳ ಪಾಲಿಗೆ ಉರುಳಾಗಿ ಪರಿಣಮಿಸುತ್ತವೆ ಎಂದುಡಿಎಫ್‌ಎಸ್‌ ಅಧಿಕಾರಿಗಳು ವಿವರಿಸಿದರು.

ಆಗಸ್ಟ್‌ನಲ್ಲಿ 882 ಪಕ್ಷಿಗಳು, 345 ಪ್ರಾಣಿಗಳನ್ನು ರಕ್ಷಣೆ ಮಾಡಲಾಯಿತು. ಇದು ಒಂದು ತಿಂಗಳಲ್ಲಿ ರಕ್ಷಣೆ ಮಾಡಿದ ಪಕ್ಷಿಗಳ ಗರಿಷ್ಠ ಸಂಖ್ಯೆ ಎಂದೂ ಅಧಿಕಾರಿಗಳು ಹೇಳಿದರು.

ADVERTISEMENT

ಕಾಗೆ, ಪಾರಿವಾಳ ಹಾಗೂ ಗಿಣಿ ಸೇರಿದಂತೆ ವಿವಿಧ ಪಕ್ಷಿಗಳ ರಕ್ಷಣೆ ಕೋರಿ ಜನರು ಕರೆ ಮಾಡುತ್ತಾರೆ. ಇನ್ನು, ಮನೆ ಬಳಿ ತೋಡಿರುವ ತಗ್ಗುಗಳು, ಕಾಲುವೆ ಇಲ್ಲವೇ ಒಳಚರಂಡಿಗಳಲ್ಲಿ ಪ್ರಾಣಿಗಳು ಸಿಕ್ಕಿಹಾಕಿಕೊಂಡಿರುವ ನಿದರ್ಶನಗಳಿವೆ. ಅದರಲ್ಲೂ ಹಸು, ನಾಯಿ ಮತ್ತು ಬೆಕ್ಕುಗಳೇ ಹೆಚ್ಚು ಸಂಕಷ್ಟಕ್ಕೆ ಸಿಲುಕುವ ಪ್ರಾಣಿಗಳಾಗಿವೆ ಎಂದರು.

ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ ವರೆಗಿನ ಅವಧಿಯಲ್ಲಿ ಒಟ್ಟು 25,416 ಕರೆಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 3,691 ಕರೆಗಳನ್ನು ಪಕ್ಷಿಗಳ ರಕ್ಷಣೆ ಮಾಡುವಂತೆ ಕೋರಿ ಮಾಡಲಾಗಿದ್ದರೆ, ಪ್ರಾಣಿಗಳ ರಕ್ಷಣೆಗೆ ನೆರವು ಬೇಡಿದ್ದ ಕರೆಗಳ ಸಂಖ್ಯೆ 2,902 ಎಂದು ತಿಳಿಸಿದರು.

ನವೆಂಬರ್‌ನಲ್ಲಿ 2,652 ಕರೆಗಳು, ಅಕ್ಟೋಬರ್‌ನಲ್ಲಿ 2,521 ಹಾಗೂ ಆಗಸ್ಟ್‌ನಲ್ಲಿ 2,466 ಕರೆಗಳನ್ನು ಸ್ವೀಕರಿಸಲಾಗಿತ್ತು ಎಂದು ಡಿಎಫ್‌ಎಸ್‌ ಮೂಲಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.