ADVERTISEMENT

ವಿಮಾನಗಳಿಗೆ ತಪ್ಪದ ಹುಸಿ ಬಾಂಬ್‌ ಕಾಟ: ಮತ್ತೆ 80ಕ್ಕೂ ಹೆಚ್ಚು ಬೆದರಿಕೆ ಕರೆ

ಪಿಟಿಐ
Published 24 ಅಕ್ಟೋಬರ್ 2024, 13:49 IST
Last Updated 24 ಅಕ್ಟೋಬರ್ 2024, 13:49 IST
   

ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಿಗೆ ಬಾಂಬ್‌ ಬೆದರಿಕೆಗಳು ಬರುವುದು ಮುಂದುವರಿದಿದ್ದು, ಗುರುವಾರ 80ಕ್ಕೂ ಹೆಚ್ಚು ವಿಮಾನಗಳಿಗೆ ಈ ರೀತಿಯ ಬೆದರಿಕೆ ಸಂದೇಶಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. 

ಏರ್‌ ಇಂಡಿಯಾ, ವಿಸ್ತಾರಾ ಮತ್ತು ಇಂಡಿಗೊ ಸಂಸ್ಥೆಗಳ ತಲಾ 20 ವಿಮಾನಗಳಿಗೆ, ಆಕಾಸಾ ಏರ್‌ ಸಂಸ್ಥೆಯ 13 ಹಾಗೂ ಅಲಯನ್ಸ್‌ ಏರ್‌ ಮತ್ತು ಸ್ಪೈಸ್‌ಜೆಟ್‌ನ ತಲಾ ಐದು ವಿಮಾನಗಳಿಗೆ ಬೆದರಿಕೆಗಳು ಬಂದಿವೆ ಎಂದು ಮೂಲಗಳು ಹೇಳಿವೆ. ಈ ಮೂಲಕ ದೇಶದಲ್ಲಿ 11 ದಿನಗಳಿಂದ ಒಟ್ಟು 250 ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆಗಳು ಬಂದಂತಾಗಿವೆ.

ಆಕಾಸಾ ಏರ್‌ ವಿಮಾನಯಾನ ಸಂಸ್ಥೆಯ 13 ವಿಮಾನಗಳಿಗೆ ಬೆದರಿಕೆಗಳು ಬಂದಿದ್ದವು. ಕೂಡಲೇ ತಪಾಸಣೆ ನಡೆಸಲಾಯಿತು. ಬೆದರಿಕೆಗಳು ಹುಸಿ ಎಂಬುದು ಖಚಿತವಾದ ಬಳಿಕ ಎಲ್ಲ ವಿಮಾನಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಲಾಯಿತು ಎಂದು ಆಕಾಸಾ ಏರ್‌ನ ವಕ್ತಾರರು ಮಾಹಿತಿ ನೀಡಿದ್ದಾರೆ.

ADVERTISEMENT

ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನ ಕೆಲವು ವಿಮಾನಗಳಿಗೆ ಗುರುವಾರ ಬೆದರಿಕೆಗಳು ಬಂದಿದ್ದವು ವಿಸ್ತಾರಾ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಚ್ಚಿ ವಿಮಾನ ನಿಲ್ದಾಣದಿಂದ ಹೊರಡುವ ಕನಿಷ್ಠ 6 ವಿಮಾನಗಳಿಗೆ ಗುರುವಾರ ಬಾಂಬ್‌ ಬೆದರಿಕೆಗಳು ಬಂದಿವೆ. ಇದರಲ್ಲಿ ಸ್ಪೈಸ್‌ಜೆಟ್‌ನ ದುಬೈ– ಕೊಚ್ಚಿ ವಿಮಾನವೂ ಸೇರಿದೆ.

ವಿಮಾನಯಾನ ಸಂಸ್ಥೆಗಳಿಗೆ ಬಾಂಬ್‌ ಬೆದರಿಕೆ ಸಂದೇಶ ಕಳಿಸುವುದನ್ನು ಗಂಭೀರ ಅಪರಾಧವಾಗಿ ಪರಿಗಣಿಸಲು ಮತ್ತು ಅಪರಾಧಿಗಳನ್ನು
‘ನೋ–ಫ್ಲೈ’ ಪಟ್ಟಿಗೆ ಸೇರಿಸಲು ಸರ್ಕಾರ ಯೋಚಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಇತ್ತೀಚೆಗೆ ತಿಳಿಸಿದ್ದರು. ಈ ಸಂಬಂಧ ಸೂಕ್ತ ಕಾನೂನುಗಳನ್ನು ಜಾರಿಗೆ ತರಲೂ ಸರ್ಕಾರ ಯೋಜಿಸಿದೆ ಎಂದೂ ಅವರು ಹೇಳಿದ್ದರು.

ಮುಂಬೈ– ಕೊಲಂಬೊ ವಿಮಾನಕ್ಕೂ ಹುಸಿ ಬಾಂಬ್‌ ಕರೆ: ಕೊಲಂಬೊ (ಪಿಟಿಐ): ಇಲ್ಲಿನ ಬಂಡಾರನಾಯಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂ ಸ್ಪರ್ಶ ಮಾಡಿದ ವಿಸ್ತಾರಾ ವಿಮಾನಯಾನ ಸಂಸ್ಥೆಯ ಮುಂಬೈ– ಕೊಲಂಬೊ ವಿಮಾನದಲ್ಲಿ ಯಾವುದೇ ಬಾಂಬ್‌ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಮಾನವು ಭೂ ಸ್ಪರ್ಶ ಮಾಡುವುದಕ್ಕೂ ಕೆಲ ನಿಮಿಷಗಳ ಮುನ್ನ ಬೆದರಿಕೆ ಕರೆ ಬಂದ ಕಾರಣ ಆತಂಕದ ವಾತಾವರಣ
ನಿರ್ಮಾಣವಾಗಿತ್ತು.

ಬೆದರಿಕೆ ಕರೆ ಬೆನ್ನಲ್ಲೇ ತುರ್ತು ಪರಿಸ್ಥಿತಿ ಘೋಷಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದು
ಕೊಳ್ಳಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 

107 ಪ್ರಯಾಣಿಕರು, ಒಂದು ಶಿಶು ಮತ್ತು ಎಂಟು ಸಿಬ್ಬಂದಿಯನ್ನು ಒಳಗೊಂಡಿದ್ದ ವಿಮಾನವು ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿತು. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ, ಸ್ಥಳದಿಂದ ತೆರವುಗೊಳಿಸಿದ ಬಳಿಕ ವಿಮಾನ ತಪಾಸಣೆ ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ದತ್ತಾಂಶ ಹಂಚಿಕೊಳ್ಳಲು ‘ಮೆಟಾ’, ‘ಎಕ್ಸ್‌’ಗೆ ಸೂಚನೆ

ನವದೆಹಲಿ (ಪಿಟಿಐ): ವಿಮಾನಯಾನ ಸಂಸ್ಥೆಗಳಿಗೆ ಬರುತ್ತಿರುವ ಹುಸಿ ಬಾಂಬ್‌ ಬೆದರಿಕೆ ಸಂದೇಶಗಳು ಮತ್ತು ಕರೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇವುಗಳ ಹಿಂದಿರುವವರನ್ನು ಗುರುತಿಸಲು ಪ್ರಾರಂಭಿಸಿದೆ. ಈ ರೀತಿಯ ಸಂದೇಶಗಳ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ‘ಮೆಟಾ’ ಮತ್ತು ‘ಎಕ್ಸ್‌’ಗಳಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇಂತಹ ಹುಸಿ ಬೆದರಿಕೆ ಕರೆಗಳ ಹಿಂದೆ ಇರುವವರನ್ನು ಗುರುತಿಸಲು ಸಹಕರಿಸುವಂತೆ ಬಹುರಾಷ್ಟ್ರೀಯ ತಂತ್ರಜ್ಞಾನ ಸಮೂಹಗಳನ್ನೂ ಸರ್ಕಾರ ಕೇಳಿಕೊಂಡಿದೆ.

ಈ ರೀತಿಯ ಹುಸಿ ಬಾಂಬ್‌ ಬೆದರಿಕೆ ಸಂದೇಶ, ಕರೆಗಳ ಹಿಂದೆ ಇದ್ದ ಕೆಲ ವ್ಯಕ್ತಿಗಳನ್ನು ಸರ್ಕಾರ ಪತ್ತೆ ಮಾಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹುಸಿ ಬೆದರಿಕೆ ಸಂದೇಶಗಳು ಎಲ್ಲಿಂದ ಬಂದವು ಮತ್ತು ಅದರ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ವಿವರಗಳನ್ನು ನೀಡಲು ಮೂಲಗಳು ನಿರಾಕರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.