ADVERTISEMENT

ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಕಾಲ್ತುಳಿತ: 116 ಸಾವು

ಉತ್ತರ ಪ್ರದೇಶದಲ್ಲಿ ‘ಸತ್ಸಂಗ’ದ ವೇಳೆ ದುರಂತ; ಆಸ್ಪತ್ರೆ ಎದುರು ಹೆಣಗಳ ರಾಶಿ

​ಪ್ರಜಾವಾಣಿ ವಾರ್ತೆ
ಪಿಟಿಐ
Published 2 ಜುಲೈ 2024, 19:30 IST
Last Updated 2 ಜುಲೈ 2024, 19:30 IST
<div class="paragraphs"><p>ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲೆಯ ಫೂಲರಾಯ್‌ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಭಕ್ತರು</p></div>

ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲೆಯ ಫೂಲರಾಯ್‌ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಭಕ್ತರು

   

ಪಿಟಿಐ ಚಿತ್ರ

ಲಖನೌ: ಉತ್ತರ ಪ್ರದೇಶದ ಹಾಥರಸ್‌ ಜಿಲ್ಲೆಯ ಫೂಲರಾಯ್ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸತ್ಸಂಗ’ದ ವೇಳೆ ಸಂಭವಿಸಿದ ಕಾಲ್ತುಳಿತದಿಂದಾಗಿ ಕನಿಷ್ಠ 116 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ADVERTISEMENT

ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೇ ಅಧಿಕವಿದೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಸತ್ಸಂಗದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮ ಮುಕ್ತಾಯಗೊಂಡ ನಂತರ, ಸಭಾಂಗಣದಿಂದ ಹೊರಹೋಗಲು ಜನ ದೊಡ್ಡಸಂಖ್ಯೆಯಲ್ಲಿ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

‘ಕಾರ್ಯಕ್ರಮ ನಡೆದ ಸಭಾಂಗಣ ಚಿಕ್ಕದಿತ್ತು, ನಿರ್ಗಮನ ದ್ವಾರವೂ ಕಿರಿದಾಗಿತ್ತು. ಕಾರ್ಯಕ್ರಮ ಮುಗಿದ ಮೇಲೆ ಸ್ಥಳದಿಂದ ಹೊರಡುವುದಕ್ಕಾಗಿ ಮುನ್ನುಗ್ಗುತ್ತಿದ್ದಾಗ ಭಕ್ತರ ಕಾಲಡಿ ಹಲವು ಮಹಿಳೆಯರು ಹಾಗೂ ಮಕ್ಕಳು ಸಿಲುಕಿಬಿದ್ದರು. ಸ್ಥಳದಲ್ಲಿ ಉಂಟಾದ ಗದ್ದಲದಲ್ಲಿ, ಕಾಲಡಿ ಸಿಲುಕಿ ಒದ್ದಾಡುತ್ತಿದ್ದ ಮಹಿಳೆಯರು ಮತ್ತು ಮಕ್ಕಳ ಚೀರಾಟವನ್ನು ಯಾರೂ ಕೇಳಿಸಿಕೊಳ್ಳಲಿಲ್ಲ’ ಎಂದು ಪ್ರತ್ಯಕ್ಷದರ್ಶಿ ಶಕುಂತಲಾ ದೇವಿ ಎಂಬುವವರು ಪಿಟಿಐಗೆ ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸರ್ಕಾರ್ ವಿಶ್ವಹರಿ ಭೋಲೆಬಾಬಾ ಅವರ ಬೆಂಗಾವಲು ವಾಹನಗಳ ಸಂಚಾರಕ್ಕಾಗಿ ಒಂದು ದ್ವಾರವನ್ನು ಆಯೋಜಕರು ಮುಚ್ಚಿದ್ದರಿಂದ ಮತ್ತೊಂದು ದ್ವಾರದ ಮೇಲೆ ಒತ್ತಡ ಹೆಚ್ಚಾಯಿತು. ಇದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಕೆಲವು ವರದಿಗಳು ಹೇಳಿವೆ.

ಘಟನೆಗೆ ಕಾರಣ ಪತ್ತೆ ಹಚ್ಚುವುದಕ್ಕಾಗಿ ಆಗ್ರಾದ ಎಡಿಜಿಪಿ ಹಾಗೂ ಅಲಿಗಢ ವಿಭಾಗೀಯ ಆಯುಕ್ತರ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ಸರ್ಕಾರ ಹೇಳಿದೆ.

ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲೆಯ ಫೂಲರಾಯ್‌ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಜಿಲ್ಲೆ ಸಿಕಂದ್ರಾ ರಾವ್‌ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಚಿಕಿತ್ಸೆ ನೀಡಲಾಯಿತು

ದುರಂತದ ಕ್ಷಣಗಳು

* ಲಖನೌದಿಂದ 400 ಕಿ.ಮೀ. ದೂರದಲ್ಲಿನ ಫೂಲರಾಯ್‌ ಗ್ರಾಮದಲ್ಲಿ ದುರ್ಘಟನೆ

* ಕಾರ್ಯಕ್ರಮದಲ್ಲಿ ಲಕ್ಷಕ್ಕೂ ಅಧಿಕ ಭಕ್ತರು ಸೇರಿದ್ದರು

* ಅಧಿಕ ತಾಪಮಾನದ ಕಾರಣದಿಂದ ಹಲವು ಭಕ್ತರು ಅಸ್ವಸ್ಥಗೊಂಡಿದ್ದರು

* ಜಿಲ್ಲಾ ಕೇಂದ್ರ ಎಟಾದಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಗಾಯಾಳುಗಳ ದಾಖಲು

* ಕಾಲ್ತುಳಿತದಲ್ಲಿ ಮೃತಪಟ್ಟವರ ದೇಹಗಳನ್ನು, ಗಾಯಗೊಂಡವರು ಹಾಗೂ ಪ್ರಜ್ಞಾಹೀನರಾದವರನ್ನು ಟ್ರಕ್‌ ಹಾಗೂ ಇತರ ವಾಹನಗಳ ಮೂಲಕ ಸಿಕಂದ್ರಾ ರಾವ್ ಪಟ್ಟಣದ ಆಸ್ಪತ್ರೆಗೆ ಸ್ಥಳಾಂತರ

* ನೆರೆ ರಾಜ್ಯಗಳಿಂದ ಬಂದಿದ್ದ ಭಕ್ತರೂ ಕಾರ್ಯಕ್ರಮದಲ್ಲಿ ಭಾಗಿ

* ಪರಿಹಾರ ಕಾರ್ಯಕ್ಕೆ ನೆರವಾಗಲು ಅಕ್ಕಪಕ್ಕದ ಜಿಲ್ಲೆಗಳ ಪೊಲೀಸ್ ಸಿಬ್ಬಂದಿ ನಿಯೋಜನೆ 

ಪರಿಹಾರ ಘೋಷಿಸಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು ಹಾಥರಸ್‌ ಜಿಲ್ಲೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ
₹50 ಸಾವಿರ ಪರಿಹಾರ ಘೋಷಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಉತ್ತರ ಪ್ರದೇಶದ ಹಾಥ್ರಸ್‌ ಜಿಲ್ಲೆಯ ಫೂಲರಾಯ್‌ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ತನ್ನ ಮಗುವನ್ನು ಕಳೆದುಕೊಂಡು ರೋದಿಸುತ್ತಿರುವ ಮಹಿಳೆ

ನೆರವಿಗೆ ಧಾವಿಸಿದ ಎನ್‌ಡಿಆರ್‌ಎಫ್‌

ಹಾಥರಸ್‌ನಲ್ಲಿ ಕಾಲ್ತುಳಿತದಿಂದ ಗಾಯಗೊಂಡವರ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ವೈದ್ಯಕೀಯ ತಂಡವನ್ನು ಕಳುಹಿಸಿಕೊಟ್ಟಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ‘ಎಕ್ಸ್‌’ನಲ್ಲಿ ಈ ಮಾಹಿತಿಯನ್ನು ಹಂಚಿ
ಕೊಂಡಿದ್ದು, ‘ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೊಂದಿಗೆ ಮಾತನಾಡಿದ್ದು, ಕೇಂದ್ರದಿಂದ ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ಮೃತದೇಹಗಳು ಚೆಲ್ಲಾಪಿಲ್ಲಿ

ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳು, ಮೃತದೇಹಗಳ ಮೇಲೆ ಬಿದ್ದು, ಹೊರಳಾಡುತ್ತಾ ರೋದಿಸುತ್ತಿದ್ದ ಸಂಬಂಧಿಗಳು, ಪರಸ್ಪರ ಸಮಾಧಾನ ಹೇಳುತ್ತಿದ್ದ ಗ್ರಾಮಸ್ಥರು...

ಸಿಕಂದ್ರಾ ರಾವ್‌ ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಕಂಡುಬಂದ ಮನಕಲಕುವ ದೃಶ್ಯಗಳಿವು.
ಟ್ರಕ್‌ವೊಂದರಲ್ಲಿ 5–6 ಮೃತದೇಹಗಳ ನಡುವೆ ಕುಳಿತಿದ್ದ ಮಹಿಳೆಯೊಬ್ಬರು ತಮ್ಮ ಮಗಳ ಶವವನ್ನು ಕೆಳಗೆ ಇಳಿಸಿಕೊಡುವಂತೆ ರೋದಿಸುತ್ತಿದ್ದ ಹೃದಯವಿದ್ರಾವಕ ದೃಶ್ಯ ಅಲ್ಲಿ ನೆರೆದಿದ್ದ ಎಲ್ಲರಲ್ಲೂ ಕಣ್ಣೀರು ಉಕ್ಕುವಂತೆ ಮಾಡಿತ್ತು. ಬಸ್ಸಿನಲ್ಲಿ ನಿಸ್ತೇಜವಾಗಿ ಮಲಗಿದ್ದ ವ್ಯಕ್ತಿಗಳ ಶರೀರಗಳು ದುರಂತದ ಭೀಕರತೆಗೆ ಕನ್ನಡಿ ಹಿಡಿದ್ದವು.

ಹಲವು ಗಾಯಾಳುಗಳನ್ನು ಆಸ್ಪತ್ರೆಯ ಮುಂಭಾಗದಲ್ಲಿ ನೆಲದ ಮೇಲೆ ಮಲಗಿಸಲಾಗಿತ್ತು. ಆಸ್ಪತ್ರೆಯ ಸುತ್ತ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ದುರಂತದ ನಿರ್ವಹಣೆಯಲ್ಲಿ ಸ್ಥಳೀಯ ಆಡಳಿತ ಮುಗ್ಗರಿಸಿದೆ ಎಂಬ ಆಕ್ರೋಶ ಅಲ್ಲಿ ನೆರೆದವರಲ್ಲಿ ಮಡುವುಗಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.