ಕೋಲ್ಕತ್ತ: ಚುನಾವಣಾ ಫಲಿತಾಂಶದ ಬಳಿಕ ನಡೆದ ಗಲಭೆಯಲ್ಲಿ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗಲು ತೆರಳಿದ್ದ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರುಳೀಧರನ್ ಅವರ ಕಾರು ಮತ್ತು ಬೆಂಗಾವಲು ವಾಹನದ ಮೇಲೆ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಪಂಚಕುರಿ ಹಳ್ಳಿಯ ಬಳಿ ಗುರುವಾರ ಅಪರಿಚಿತ ಗುಂಪೊಂದು ದಾಳಿ ನಡೆಸಿದೆ.
ಘಟನೆಯಲ್ಲಿ ಸಚಿವರ ಕಾರು ಧ್ವಂಸವಾಗಿದೆ. ತಮ್ಮ ‘ಬೆಂಗಾವಲು ವಾಹನಗಳ ಮೇಲಿನ ದಾಳಿಯ ಹಿಂದೆ ಟಿಎಂಸಿ ಗೂಂಡಾಗಳ ಕೈವಾಡಿವಿದೆ‘ ಎಂದು ಮುರಳೀಧರನ್ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮುರಳೀಧರನ್, ‘ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಲು ನಾನು ಪಶ್ಚಿಮ ಮಿಡ್ನಾಪುರಕ್ಕೆ ತೆರಳಿದ್ದೆ. ಒಬ್ಬೊಬ್ಬರನ್ನೇ ಮಾತನಾಡಿಸುತ್ತಾ, ಮನೆಯಿಂದ ಮನೆಗೆ ತೆರಳುತ್ತಿದ್ದೆ. ಇದ್ದಕ್ಕಿದ್ದಂತೆ ಒಂದು ಗುಂಪು ನನ್ನ ಮೇಲೆ ದಾಳಿ ಮಾಡಿತು‘ ಎಂದು ಮುರಳೀಧರನ್ ಹೇಳಿದ್ದಾರೆ.
‘ನಾನು ಸುರಕ್ಷಿತವಾಗಿದ್ದೇನೆ. ಆದರೆ ನನ್ನ ಚಾಲಕನಿಗೆ ಗಾಯಗಳಾಗಿವೆ. ಕೆಲವು ಕಾರುಗಳ ಕಿಟಕಿ ಗಾಜುಗಳೂ ಒಡೆದಿವೆ‘ ಎಂದು ಸಚಿವರು ತಿಳಿಸಿದ್ದಾರೆ. ಮುರಳೀಧರನ್ ಅವರೊಂದಿಗೆ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ‘ಪೊಲೀಸರ ಸಮ್ಮುಖದಲ್ಲೇ ಈ ದಾಳಿ ನಡೆದಿದೆ‘ಎಂದು ಆರೋಪಿಸಿದ್ದಾರೆ.
‘ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಕೆಲವು ಅಪರಿಚಿತ ವ್ಯಕ್ತಿಗಳು ದಾಳಿ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ‘ ಎಂದು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ‘ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.