ತಿರುವನಂತಪುರ: ದೇವಸ್ಥಾನ ಮತ್ತು ಮಸೀದಿಯ ಹೆಸರನ್ನು ಒಂದೇ ನಾಮಫಲಕದಲ್ಲಿ ಛಾಪಿಸುವ ಮೂಲಕ ಕೇರಳದ ತಿರುವನಂತಪುರದಲ್ಲಿ ಕೋಮು ಸೌಹಾರ್ದತೆ ಸಾರಲಾಗಿದೆ.
ಸದ್ಯ ಇದರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ರಸ್ತೆಯೊಂದರ ಆರಂಭದಲ್ಲಿ ನಿರ್ಮಿಸಿದ ದೊಡ್ಡ ಕಮಾನಿನ ಮೇಲೆ ಅರ್ಧ ಭಾಗದಲ್ಲಿ ಮೆಲೆಕುಟ್ಟಿಮೂಡು ಶ್ರೀ ಚಾಮುಂಡೇಶ್ವರಿ ದೇವಾಲಯ ಎಂದು ಬರೆಯಲಾಗಿದೆ, ಇನ್ನೊಂದು ಭಾಗಕ್ಕೆ ವೆಂಜರಮೂಡು ಪರಯಿಲ್ ಮಸೀದಿ ಎಂದು ಬರೆಯಲಾಗಿದೆ.
ದೇವಸ್ಥಾನದ ಜೀರ್ಣೋದ್ಧಾರದ ಬಳಿಕ ಆಡಳಿತಮಂಡಳಿಯು ದೇವಾಲಯಕ್ಕೆ ಬರುವ ದಾರಿಯನ್ನು ಜನ ಗುರುತಿಸುವಂತೆ ಹೇಗೆ ಮಾಡುವುದು ಎಂದು ಯೋಚಿಸಿತ್ತು, ಅದಾಗಲೇ ಮಸೀದಿಯ ಕಮಾನು ಹಾಕಲಾಗಿತ್ತು. ಹೀಗಾಗಿ ದೇವಾಲಯದ ಆಡಳಿತ ಮಂಡಳಿಯ ಕೋರಿಕೆ ಮೇರೆಗೆ ಮಸೀದಿಯು ತನ್ನ ಕಮಾನಿನಲ್ಲಿ ಅರ್ಧಭಾಗವನ್ನು ನೀಡಲು ಅನುಮತಿಸಿತು.
ಕಮಾನಿನ ಮೇಲೆ ಓಂ, ನಕ್ಷತ್ರ ಮತ್ತು ಅರ್ಧಚಂದ್ರನ ಚಿಹ್ನೆಯನ್ನು ಬರೆಯಲಾಗಿದೆ.
ಸದ್ಯ ಇದರ ಫೋಟೊಗಳನ್ನು ಕಾಂಗ್ರೆಸ್, ಸಿಪಿಐ(ಎಂ), ಭಾರತೀಯ ಮುಸ್ಲಿಂ ಒಕ್ಕೂಟದ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕೇರಳದಲ್ಲಿ ಜಾತ್ಯತೀತ ಮತ್ತು ಕೋಮು ಸೌಹಾರ್ದತೆ ಇದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.