ADVERTISEMENT

ವಾರಾಣಸಿ: ಪಿಎಂ ಮೋದಿ ಬರುತ್ತಾರೆಂದು ಮಸೀದಿಗೆ 'ಕೇಸರಿ' ಬಣ್ಣ ಬಳಿದ ಸ್ಥಳೀಯ ಆಡಳಿತ

ಪಿಟಿಐ
Published 8 ಡಿಸೆಂಬರ್ 2021, 7:26 IST
Last Updated 8 ಡಿಸೆಂಬರ್ 2021, 7:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್‌ 13ಕ್ಕೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ, ಈ ಹಿನ್ನೆಲೆ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಎದಿರಾಗುವ ಮಸೀದಿಯೊಂದಕ್ಕೆ ಸ್ಥಳೀಯ ಆಡಳಿತವು 'ಕೇಸರಿ' ಬಣ್ಣ ಬಳಿದಿದ್ದಾಗಿ ಮಸೀದಿ ಸಮಿತಿಯ ಸದಸ್ಯರು ಹೇಳಿದ್ದಾರೆ.

ವಾರಾಣಸಿಯ ಬುಲಾನಲಾ ಪ್ರದೇಶದಲ್ಲಿರುವ ಮಸೀದಿಗೆ ಕೇಸರಿ ಬಣ್ಣ ಬಳಿದ ಆರೋಪದ ಬಗ್ಗೆ ಸ್ಥಳೀಯ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದ ಅಧಿಕಾರಿಗಳು ರಸ್ತೆಯ ಅಕ್ಕಪಕ್ಕದ ಎಲ್ಲ ಕಟ್ಟಡಗಳಿಗೆ ಒಂದೇ ಬಣ್ಣವನ್ನು ಬಳಿಯುವ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ.

ಮುಸ್ಲಿಂ ಸಮುದಾಯದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಮಸೀದಿಗೆ ಪುನಃ ಬಿಳಿ ಬಣ್ಣವನ್ನು ಬಳಿಯಲಾಗಿದೆ.

ADVERTISEMENT

'ಮಸೀದಿ ಮೊದಲು ಬಿಳಿ ಬಣ್ಣದ್ದಾಗಿತ್ತು. ನಂತರ ಮಸೀದಿಯ ಸಮಿತಿಯನ್ನು ಕೇಳದೆ ಸ್ಥಳೀಯ ಆಡಳಿತವು ಕೇಸರಿ ಬಣ್ಣ ಬಳಿದಿತ್ತು' ಎಂದು ಅಂಜುಮನ್ ಈಂತ್‌ಜಾಮಿಯಾ ಮಸೀದಿ ಸಮೀತಿಯ ಮೊಹಮ್ಮದ್‌ ಎಜಾಜ್‌ ಇಲಾಶಿ ತಿಳಿಸಿದ್ದಾರೆ.

ಈ ಕೃತ್ಯದ ಹಿಂದೆ ಪಿತೂರಿ ಇರುವುದಾಗಿ ಆರೋಪಿಸಿದ ಮೊಹಮ್ಮದ್‌ ಎಜಾಜ್‌, ನಂತರ ಕಾಶಿ ವಿಶ್ವನಾಥ ದೇವಸ್ಥಾನದ ಕಚೇರಿಗೆ ಆಕ್ಷೇಪ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಆಕ್ಷೇಪ ಸಲ್ಲಿಸುವ ಪ್ರಯತ್ನವನ್ನು ನಡೆಸಿದ್ದೆ. ಆದರೆ ಮ್ಯಾಜಿಸ್ಟ್ರೇಟ್‌ ಅವರನ್ನು ಭೇಟಿಯಾಗಲಿಲ್ಲ. ಕೊನೆಗೆ ಆಡಳಿತ ಮಂಡಳಿ ಅರ್ಥೈಸಿಕೊಂಡು, ಮಸೀದಿಗೆ ಪುನಃ ಬಿಳಿ ಬಣ್ಣವನ್ನು ಬಳಿದಿದೆ ಎಂದು ಮೊಹಮ್ಮದ್‌ ಎಜಾಜ್‌ ಹೇಳಿದ್ದಾರೆ.

ವಾರಾಣಸಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ಅಧಿಕಾರಿಯಾಗಿರುವ ಸುನೀಲ್‌ ವರ್ಮಾ ಅವರು ದೇವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯ ಕಟ್ಟಡಗಳಿಗೆ ಏಕೀಕೃತ ಬಣ್ಣವನ್ನುಬಳಿಯಲಾಗುವುದು ಎಂದು ತಿಳಿಸಿದ್ದರು.

ಹೆಚ್ಚಿನ ಕಟ್ಟಡಗಳು ಮರಳುಗಲ್ಲಿನಿಂದ ಕಟ್ಟಿದ್ದಾಗಿದ್ದು, ಅವುಗಳದ್ದು 'ತಿಳಿ ಗುಲಾಬಿ' ಬಣ್ಣವಾಗಿದೆ. ಹಾಗಾಗಿ ಈ ಪ್ರದೇಶದ ಎಲ್ಲ ಕಟ್ಟಡಗಳಿಗೆ ಒಂದೇ ಬಣ್ಣವನ್ನು ಬಳಿಯಲಾಗುತ್ತಿದೆ ಎಂದು ಸುನೀಲ್‌ ವರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.