ಹೈದರಾಬಾದ್: ದರೋಡೆ ಮತ್ತು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಮನಗೆ ನುಗ್ಗಿದ್ದ ಇಬ್ಬರು ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ತಾಯಿ ಮತ್ತು ಮಗಳು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸಿರುವ ಘಟನೆ ರಸೂಲ್‌ಪುರದಲ್ಲಿ ನಡೆದಿದೆ.
ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜತೆಗೆ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ತಾಯಿ ಮತ್ತು ಮಗಳು ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ ಬಿಜೆಪಿ ಘಟಕದ ಅಧ್ಯಕ್ಷ ಜಿ. ಕಿಶನ್ ರೆಡ್ಡಿ ಅವರು ಮಹಿಳೆಯ ನಿವಾಸಕ್ಕೆ ಭೇಟಿ ನೀಡಿದ್ದು, ದರೋಡೆಕೋರರ ವಿರುದ್ಧ ಹೋರಾಡಿದ ತಾಯಿ-ಮಗಳಿಗೆ ಭಾರತ ಸರ್ಕಾರದಿಂದ ಪ್ರಶಂಸಾ ಪತ್ರವನ್ನು ನೀಡಿ, ಸನ್ಮಾನಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕಿಶನ್ ರೆಡ್ಡಿ, ‘ತಾಯಿ ಮತ್ತು ಮಗಳು ಶೌರ್ಯದಿಂದ ಹೋರಾಟ ನಡೆಸುವ ಮೂಲಕ ಸಮಾಜಕ್ಕೆ, ಎಲ್ಲಾ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಜತೆಗೆ ನಾನು ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಭಾರತ ಸರ್ಕಾರದ ಪರವಾಗಿ ಅವರನ್ನು ಅಭಿನಂದಿಸಿ, ಪ್ರಶಂಸಾ ಪತ್ರವನ್ನು ಹಸ್ತಾಂತರಿಸಿದ್ದೇನೆ. ತಾಯಿ ಮತ್ತು ಮಗಳು ಯಾವುದೇ ಆತ್ಮರಕ್ಷಣೆಯ ತರಬೇತಿಯನ್ನು ಪಡೆದಿಲ್ಲ. ಆದರೆ, ಸಂಪೂರ್ಣ ಆತ್ಮವಿಶ್ವಾಸದಿಂದ ಹೋರಾಟ ನಡೆಸಿದ್ದಾರೆ. ಸಮಾಜದಲ್ಲಿ ಹೆಣ್ಣು ಮಕ್ಕಳು ಸುಶಿಕ್ಷಿತರಾಗುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಎಂಬುದಕ್ಕೆ ಇದುವೇ ಸಾಕ್ಷಿ’ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೈದರಾಬಾದ್ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ಸುಶೀಲ್ ಕುಮಾರ್ ಮತ್ತು ಪ್ರೇಮಚಂದ್ರ ಎಂದು ಗುರುತಿಸಲಾಗಿದೆ. ಅರೋಪಿಗಳ ಬಳಿಯಿದ್ದ ಬದೂಕು, ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.