ADVERTISEMENT

₹1ಕ್ಕೆ ಇಡ್ಲಿ; 'ಇಡ್ಲಿ ಅಮ್ಮನಿಗೆ' ಹೊಸ ಮನೆ ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮೇ 2022, 14:20 IST
Last Updated 8 ಮೇ 2022, 14:20 IST
ತಮಿಳುನಾಡಿನ 'ಇಡ್ಲಿ ಅಮ್ಮ'
ತಮಿಳುನಾಡಿನ 'ಇಡ್ಲಿ ಅಮ್ಮ'   

ಬೆಂಗಳೂರು: ಎಲ್‌ಪಿಜಿ ಸಿಲಿಂಡರ್‌ ಬೆಲೆ ಸಾವಿರ ರೂಪಾಯಿ ದಾಟಿದೆ, ಉದ್ದಿನ ಬೇಳೆ, ಅಕ್ಕಿ ದರದಲ್ಲೂ ಏರಿಕೆಯಾಗಿದೆ. ಹೀಗಿದ್ದರೂ 'ಇಡ್ಲಿ ಅಮ್ಮ' ರೂಪಾಯಿಗೊಂದು ಇಡ್ಲಿ ಕೊಡುವುದು ಮುಂದುವರಿಸಿದ್ದಾರೆ. ಹಸಿದು ಬಂದವರಿಗೆ ಸೌದೆ ಒಲೆ, ಗೋಡೆ ಕುಸಿದಿರುವ ಮನೆಯಲ್ಲೇ ಕಡಿಮೆ ದುಡ್ಡಿನಲ್ಲಿ ಹೊಟ್ಟೆ ತುಂಬ ಇಡ್ಲಿ ಬಡಿಸುತ್ತಿದ್ದ ಅಜ್ಜಿಗೆ ತಾಯಂದಿರ ದಿನದಂದು ಹೊಸ ಮನೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಆನಂದ್‌ ಮಹೀಂದ್ರಾ.

ದಕ್ಷಿಣ ಭಾರತದ ಬಹುತೇಕ ಎಲ್ಲ ಹೋಟೆಲ್‌ಗಳಲ್ಲೂ ಸಿಗುವ ತಿಂಡಿ 'ಇಡ್ಲಿ'. ಮೈಸೂರು ಮಲ್ಲಿಗೆ ಇಡ್ಲಿ, ಬಿಡದಿಯ ತಟ್ಟೆ ಇಡ್ಲಿ, ಕಾಂಚೀಪುರಂ ಇಡ್ಲಿ,...ಹೀಗೆ ಜನಪ್ರಿಯ ಇಡ್ಲಿ ತಾಣಗಳೂ ಇವೆ. ಈ ನಡುವೆ ಕೇವಲ ಒಂದು ರೂಪಾಯಿಗೆ ಇಡ್ಲಿ ಕೊಡುವ ಮೂಲಕ ದೇಶದಾದ್ಯಂತ ಸುದ್ದಿಯಾದವರು ತಮಿಳುನಾಡಿನ ಕಮಲತ್ತಾಳ್‌. 85ರ ವಯಸ್ಸಿನಲ್ಲೂ ನಿತ್ಯ ಸೂರ್ಯೋದಯದ ಹೊತ್ತಿಗೆ ನೂರಾರು ಇಡ್ಲಿ ಬೇಯಿಸುವ ಈ 'ಅನ್ನಪೂರ್ಣೆಗೆ' ಕೈಗಾರಿಕೋದ್ಯಮಿ ಆನಂದ್‌ ಮಹೀಂದ್ರಾ ಅವರು ಚೊಕ್ಕವಾದ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ. ಅಲ್ಲಿ ಅಡುಗೆ ಮಾಡಲು ಪ್ರತ್ಯೇಕ ಕೋಣೆಯ ವ್ಯವಸ್ಥೆ ಇದೆ.

ಇಡ್ಲಿ ಅಮ್ಮ ಹೊಸ ಮನೆಗೆ ಪ್ರವೇಶಿಸುತ್ತಿರುವ ವಿಡಿಯೊ ಅನ್ನು ಆನಂದ್‌ ಮಹೀಂದ್ರಾ ಹಂಚಿಕೊಂಡಿದ್ದಾರೆ. 'ಸಮಯಕ್ಕೆ ಸರಿಯಾಗಿ ಮನೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಶ್ರಮಿಸಿದ ನಮ್ಮ ತಂಡಕ್ಕೆ ಕೃತಜ್ಞತೆಗಳು. ಅದರಿಂದಾಗಿ ತಾಯಂದಿರ ದಿನದಂದು ಇಡ್ಲಿ ಅಮ್ಮನಿಗೆ ಮನೆಯನ್ನು ಉಡುಗೊರೆಯಾಗಿ ನೀಡಲು ಸಾಧ್ಯವಾಗಿದೆ. ಆಕೆ ಆರೈಕೆ, ಕಾಳಜಿ ಹಾಗೂ ನಿಸ್ವಾರ್ಥದ ಗುಣಗಳ ಸಮ್ಮೇಳವಾಗಿರುವಳು. ಅವರಿಗೆ ಮತ್ತು ಕಾರ್ಯಕ್ಕೆ ಬೆಂಬಲ ನೀಡಲು ಅವಕಾಶ ದೊರೆತಿದೆ' ಎಂದು ಟ್ವೀಟಿಸುವ ಜೊತೆಗೆ ತಾಯಂದಿರ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ADVERTISEMENT

ತಮಿಳುನಾಡಿನ ಕೊಯಮತ್ತೂರಿನ ಹೊರವಲಯದಲ್ಲಿ ವಡಿವೇಳಂಪಾಳಯಂನಲ್ಲಿ ಕಮಲತ್ತಾಳ್ ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ರುಚಿಕರ ಇಡ್ಲಿಗಳನ್ನು ತಯಾರಿಸುತ್ತಿದ್ದಾರೆ. ಒಂದು ರೂಪಾಯಿಗೆ ಒಂದು ಇಡ್ಲಿ ಮತ್ತು ಚಟ್ನಿ ಕೊಡುವ ಅವರು ಬೆಳಿಗ್ಗೆ 6ರಿಂದ ಮಧ್ಯಾಹ್ನದ ವರೆಗೂ ಕಾಯಕ ಮುಂದುವರಿಸುತ್ತಾರೆ. ಅವರ ಮನೆ ಹೋಟೆಲ್‌ಗೆ ವಲಸೆ ಕಾರ್ಮಿಕರು, ಬಡವರೇ ಹೆಚ್ಚಾಗಿ ಬರುವುದರಿಂದ ₹1ಕ್ಕೆ ಇಡ್ಲಿ ಕೊಡುತ್ತಿದ್ದಾರೆ.

ಸೌದೆ ಒಲೆಯಲ್ಲಿ ಇಡ್ಲಿ ಬೇಯಿಸಿ, ರುಬ್ಬುಕಲ್ಲು ಬಳಸಿ ಚಟ್ನಿ ರುಬ್ಬುತ್ತಿದ್ದ ಇಡ್ಲಿ ಅಮ್ಮನ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಂತೆ ಆನಂದ್‌ ಮಹೀಂದ್ರಾ, ಎಲ್‌ಪಿಜಿ ಸಿಲಿಂಡರ್‌ ಸಂಪರ್ಕ ಕೊಡಿಸುವುದಾಗಿ 2019ರ ಸೆಪ್ಟೆಂಬರ್‌ನಲ್ಲಿ ಟ್ವೀಟಿಸಿದ್ದರು. ಅವರು ಟ್ವೀಟ್‌ ಮಾಡಿದ ಮಾರನೆಯ ದಿನವೇ ಎಚ್‌ಪಿಸಿಎಲ್‌ ಕಂಪನಿಯವರು ಎಲ್‌ಪಿಜಿ ಸಿಲಿಂಡರ್‌ ಮತ್ತು ಒಲೆಯ ಸಂಪರ್ಕ ಕಲ್ಪಿಸಿದ್ದರು ಹಾಗೂ ವೆಟ್‌ ಗ್ರೈಂಡರ್‌ ಸಹ ಕೊಟ್ಟಿದ್ದರು.‌

'ಶೀಘ್ರದಲ್ಲೇ ಇಡ್ಲಿ ಅಮ್ಮ ಸ್ವಂತ ಮನೆಯಲ್ಲಿ ಇಡ್ಲಿಯನ್ನು ಬಡಿಸಲಿದ್ದಾರೆ' ಎಂದು 2021ರ ಏಪ್ರಿಲ್‌ನಲ್ಲಿ ಮಹೀಂದ್ರಾ ಟ್ವೀಟಿಸಿದ್ದರು. ಇದೀಗ ಆ ಭರವಸೆ ಪೂರ್ಣಗೊಂಡಿದೆ. ಅವರ ಕಾರ್ಯಕ್ಕೆ ನೆಟ್ಟಿಗೆ ಮೆಚ್ಚುಗೆಯ ಮಳೆ ಸುರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.