ಮುಂಬೈ: ಏಕನಾಥ್ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರ ಅನರ್ಹತೆ ಕೋರಿ ಎನ್‌ಸಿಪಿ ಪಕ್ಷವು ವಿಧಾನ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್, ‘ಅನರ್ಹತೆ ಅರ್ಜಿಯನ್ನು ಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಅವರಿಗೆ ಸಲ್ಲಿಸಲಾಗಿದೆ‘ ಎಂದರು.
'ಎನ್‌ಸಿಪಿಯ ನಿರ್ಧಾರ ಕೈಗೊಳ್ಳುವ ಅಧಿಕಾರ ಶರದ್ ಪವಾರ್ ಬಳಿಯೇ ಇದೆ ಎಂದು ತಿಳಿಸುವ ಇ-ಮೇಲ್ ಸಂದೇಶವನ್ನು ಭಾರತದ ಚುನಾವಣಾ ಆಯೋಗಕ್ಕೂ ಕಳುಹಿಸಲಾಗಿದೆ‘ ಎಂದು ಹೇಳಿದರು.
‘ಪಕ್ಷ ತೊರೆದ ಶಾಸಕರನ್ನು ಈಗಲೇ ಪಕ್ಷದ್ರೋಹಿಗಳು ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಅವರು ದ್ರೋಹ ಮಾಡಿರುವುದು ಇನ್ನೂ ಸಾಬೀತಾಗಿಲ್ಲ. ಅನೇಕರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ‘ ಎಂದು ಅವರು ಹೇಳಿದರು.
ಭಾನುವಾರ ನಡೆದ ಕ್ಷಿಪ‍್ರ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಶಿಂದೆ ಸರ್ಕಾರವನ್ನು ಬೆಂಬಲಿಸಿದ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಶರದ್ ಪವಾರ್ ಅವರ ಕಟ್ಟಾ ಅನುಯಾಯಿಗಳಾಗಿದ್ದ ಛಗನ್ ಭುಜಬಲ್ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರು ಪಕ್ಷ ತೊರೆದಿರುವುದು ಅಚ್ಚರಿ ಮೂಡಿಸಿತ್ತು. ಬೆಂಬಲ ಸೂಚಿಸಿದ ಎಲ್ಲರೂ ಶಿಂದೆ ನೇತ್ರತ್ವದ ಸರ್ಕಾರದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.