ಭೋಪಾಲ್ (ಪಿಟಿಐ): ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿರುವ ಕಾಂಗ್ರೆಸ್, ಬಿಜೆಪಿ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಸೋಮವಾರವೂ ಪ್ರತಿಭಟನೆ ನಡೆಸಿದರು.
ಮೊರೆನಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ ಕಾರಣ ಮಾಜಿ ಆರೋಗ್ಯ ಸಚಿವ ರುಸ್ತುಂ ಸಿಂಗ್ ಸೋಮವಾರ ಬಿಜೆಪಿ ತೊರೆದು ಬಹುಜನ ಸಮಾಜ ಪಕ್ಷಕ್ಕೆ ಸೇರಿದರು.
78 ವರ್ಷದ ಸಿಂಗ್ ಅವರಿಗೆ ವಯಸ್ಸಿನ ಕಾರಣದಿಂದಾಗಿ ಟಿಕೆಟ್ ನಿರಾಕರಿಸಿದ್ದರಿಂದ ಅಸಮಾಧಾನಗೊಂಡಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಆದರೆ, ಬಿಜೆಪಿಯು ಮಾಜಿ ಸಚಿವ ಜಯಂತ್ ಮಲೈಯಾ (76 ವರ್ಷ) ಅವರನ್ನು ದಮೋಹ್‌ನಿಂದ ಕಣಕ್ಕಿಳಿಸಿದೆ.
ಪಕ್ಷದ ಅಭ್ಯರ್ಥಿ ರಾಮ್‌ವೀರ್ ಸಿಂಗ್ ಸಿಕರ್ವಾರ್ ಬದಲಿಗೆ ಶುಜಲುಪುರದಿಂದ ಯೋಗೇಂದ್ರ ಸಿಂಗ್ ಅಲಿಯಾಸ್ ಬಂಟಿ ಬನಾ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಘಟಕದ ಅಧ್ಯಕ್ಷ ಕಮಲ್ ನಾಥ್ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಮೂರು ದಿನಗಳಲ್ಲಿ ಭೋಪಾಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಕರ್ವಾರ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಇದು ಎರಡನೇ ಬಾರಿ.
ಈ ನಡುವೆ, ಇತ್ತೀಚೆಗೆ ಕಾಂಗ್ರೆಸ್ ಸೇರಿದ ಬಿಜೆಪಿ ಶಾಸಕ ಗಿರಿಜಾಶಂಕರ್ ಶರ್ಮಾ ಅವರ ಬದಲಿಗೆ ಹೋಶಂಗಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ಚಂದ್ರ ಗೋಪಾಲ್ ಮಲೈಯಾ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.