ADVERTISEMENT

ಉಚಿತ ಅವಲಕ್ಕಿ, ಜಿಲೇಬಿ 

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 15:54 IST
Last Updated 14 ಅಕ್ಟೋಬರ್ 2023, 15:54 IST
ಜಿಲೇಬಿ
ಜಿಲೇಬಿ   

ಇಂದೋರ್‌ (ಪಿಟಿಐ): ನಗರದ ಪ್ರಸಿದ್ಧ ಆಹಾರ ಕೇಂದ್ರ ‘56 ದುಕಾನ್’ ನಲ್ಲಿರುವ ಅಂಗಡಿಗಳ ಮಾಲೀಕರು ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 9 ಗಂಟೆಯೊಳಗೆ ಮತ ಚಲಾಯಿಸಿದವರಿಗೆ ಪೋಹ (ಅವಲಕ್ಕಿ) ಮತ್ತು ಜಿಲೇಬಿ ಒಳಗೊಂಡ ಉಚಿತ ತಿನಿಸು ನೀಡಲು ನಿರ್ಧರಿಸಿದ್ದಾರೆ.

‘ಸ್ವಚ್ಛತೆಗೆ ಸಂಬಂಧಿಸಿದಂತೆ ಇಂದೋರ್ ದೇಶದಲ್ಲಿ ಅಗ್ರಸ್ಥಾನದಲ್ಲಿದೆ. ಮತದಾನದ ವಿಷಯದಲ್ಲೂ ನಗರ ಅಗ್ರಸ್ಥಾನದಲ್ಲಿ ಇರಬೇಕೆಂದು  ಬಯಸುತ್ತೇವೆ. ಇದಕ್ಕಾಗಿ, ಮತ ಚಲಾಯಿಸಿದವರಿಗೆ ಅವಲಕ್ಕಿ ಮತ್ತು ಜಿಲೇಬಿ ನೀಡಲು ನಿರ್ಧರಿಸಿದ್ದೇವೆ’ ಎಂದು 56 ದುಕಾನ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗುಂಜನ್ ಶರ್ಮಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‌ಮತದಾನದ ದಿನವಾದ ನ. 17 ರಂದು ಬೆಳಿಗ್ಗೆ 9 ಗಂಟೆವರೆಗೆ ಮಾತ್ರ ಉಚಿತ ಕೊಡುಗೆ ಇರುತ್ತದೆ. ಬಳಿಕ ಪ್ರತಿ ಮತದಾರರಿಗೆ ಪೋಹ -ಜಿಲೇಬಿ ಬಿಲ್‌ನಲ್ಲಿ ಶೇಕಡಾ 10 ರಷ್ಟು ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಶರ್ಮಾ ಹೇಳಿದರು.

ADVERTISEMENT

ಪೊನ್ನಲ ಲಕ್ಷ್ಮಯ್ಯಗೆ ಆಹ್ವಾನ ನೀಡಿದ ಬಿಆರ್‌ಎಸ್‌ 

ಹೈದರಾಬಾದ್ (ಪಿಟಿಐ): ತೆಲಂಗಾಣ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಪಕ್ಷ ತೊರೆದ ಪೊನ್ನಲ ಲಕ್ಷ್ಮಯ್ಯ ಅವರನ್ನು ಸಚಿವ ಕೆ.ಟಿ.ರಾಮರಾವ್‌ ಅವರು ಶನಿವಾರ ಭೇಟಿ ಮಾಡಿ, ಬಿಆರ್‌ಎಸ್‌ ಸೇರುವಂತೆ ಆಹ್ವಾನ ನೀಡಿದರು. 

ಭಾನುವಾರ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್ ಅವರನ್ನು ಭೇಟಿ ಮಾಡಿದ ಬಳಿಕ ನಿರ್ಧಾರ ಪ್ರಕಟಿಸಲಾಗುವುದು ಎಂದು ಲಕ್ಷ್ಮಯ್ಯ ತಿಳಿಸಿದ್ದಾರೆ.

ಛತ್ತೀಸಗಢ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಇಂದು

ಛತ್ತೀಸಗಢ (ಪಿಟಿಐ): ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ.

ಎರಡನೇ ಹಂತದಲ್ಲಿ ಮತ್ತೊಂದು ಪಟ್ಟಿ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳ ಗೆಲುವಿಗೆ ಪಕ್ಷ ಕಾರ್ಯತಂತ್ರ ರೂಪಿಸುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. 

ಅಜಿತ್‌ ಜೋಗಿ ನೇತೃತ್ವದ ಜನತಾ ಕಾಂಗ್ರೆಸ್ ಛತ್ತೀಸಗಢ (ಜೆ) ಮತ್ತು ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ನಡುವಿನ ಮೈತ್ರಿ ಕೊನೆಗೊಂಡಿದೆ. ಬಿಎಸ್‌ಪಿಯು ಗೊಂಡವಾನ ಗಣತಂತ್ರ ಪಾರ್ಟಿ ಜತೆ ಹೊಂದಾಣಿಕೆ ಮಾಡಿಕೊಂಡಿದೆ.  ಎಎಪಿಯು ಬಿಜೆಪಿಯ ‘ಬಿ’ ಟೀಂ. ಇದು ಕಾಂಗ್ರೆಸ್‌ಗೆ ಹಾನಿ ಮಾಡಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. 

ಛತ್ತೀಸಗಢ ಜನರು ಬಹಳ ಬುದ್ಧಿವಂತರು. ಅಂತಹ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ಆಗ್ರಹ

ಚೆನ್ನೈ(ಪಿಟಿಐ): ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಮೀಸಲಿಡಲು ಅವಕಾಶ ಕಲ್ಪಿಸುವ ಮಹಿಳಾ ಮೀಸಲಾತಿ ಕಾಯ್ದೆಯನ್ನು ತಕ್ಷಣ ಅನುಷ್ಠಾನಕ್ಕೆ ತರಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶನಿವಾರ ಆಗ್ರಹಿಸಿದ್ದಾರೆ.

ಡಿಎಂಕೆ ಆಯೋಜಿಸಿದ್ದ ಮಹಿಳಾ ಹಕ್ಕುಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಿಳೆಯರು ದೇಶದ ಭವಿಷ್ಯ ರೂಪಿಸುವ  ಸಾಮೂಹಿಕ ಶಕ್ತಿಯಾಗಬಹುದು ಎಂದು ರಾಜಕೀಯ ಪಕ್ಷಗಳು ಅರಿತುಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ಸಬಲೀಕರಣದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಮಹಿಳೆಯರ ಕೆಲಸಕ್ಕೆ ಪ್ರಾಮುಖ್ಯತೆ ನೀಡಬೇಕು ಮತ್ತು ಗೌರವಿಸಬೇಕು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.