ಭೋಪಾಲ್: ಮಧ್ಯಪ್ರದೇಶದ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಬಿಜೆಪಿ 11 ಪಾಲಿಕೆಗಳ ಮೇಯರ್ ಸ್ಥಾನಗಳ ಪೈಕಿ 7ರಲ್ಲಿ ಗೆದ್ದಿದೆ. ಮೂರು ಮೇಯರ್ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದ್ದರೆ, ಒಂದು ಸ್ಥಾನವನ್ನು ಆಮ್ ಆದ್ಮಿ ಪಕ್ಷ (ಎಎಪಿ) ಇದೇ ಮೊದಲ ಬಾರಿಗೆ ಗೆದ್ದಿದೆ.
ಬುರ್ಹಾನ್‌ಪುರ್, ಸತ್ನಾ, ಖಾಂಡ್ವಾ, ಸಾಗರ್, ಉಜ್ಜಯಿನಿ, ಇಂದೋರ್ ಮತ್ತು ಭೋಪಾಲ್ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ.
ಕಳೆದ ಬಾರಿ ಬಿಜೆಪಿ ಗೆದ್ದುಕೊಂಡಿದ್ದ ಗ್ವಾಲಿಯರ್, ಜಬಲ್‌ಪುರ, ಛಿಂದ್ವಾರಾ ಮೇಯರ್ ಸ್ಥಾನಗಳನ್ನು ಈ ಬಾರಿ ಕಾಂಗ್ರೆಸ್ ಕಸಿದುಕೊಂಡಿದೆ. ಸಿಂಗ್ರೌಲಿಯ ಮೇಯರ್ ಸ್ಥಾನ ಇದೇ ಮೊದಲ ಬಾರಿಗೆ ಎಎಪಿ ಪಾಲಾಗಿದೆ.
ಜುಲೈ 6 ರಂದು ಮೊದಲ ಹಂತದಲ್ಲಿ ನಡೆದ ಸ್ಥಳೀಯ ಮತ್ತು ನಗರ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಭಾನುವಾರ ಪ್ರಕಟವಾಗಿವೆ. ಬಿಜೆಪಿ ಬಹುತೇಕ ಕಾರ್ಪೊರೇಟರ್‌ಗಳ ಸ್ಥಾನಗಳನ್ನು ಗೆದ್ದುಕೊಂಡಿದೆ.
ನವೆಂಬರ್ 2023 ರಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ನಡೆದ ಈ ಚುನಾವಣೆ ಆಡಳಿತರೂಢ ಬಿಜೆಪಿಗೆ ಎಚ್ಚರಿಕೆಯ ಗಂಟೆ ಎನಿಸಿದ್ದರೆ, ಕಾಂಗ್ರೆಸ್‌ಗೆ ಆಶಾಭಾವ ಮೂಡಿಸಿದೆ. ಎಎಪಿ ಪಾಳಯದಲ್ಲೂ ಚುನಾವಣೆ ಫಲಿತಾಂಶ ವಿಶ್ವಾಸ ಮೂಡಿಸಿದೆ.
16 ನಗರ ಪಾಲಿಕೆ ನಿಗಮ, 99 ನಗರ ಪಾಲಿಕೆ ಮತ್ತು 298 ನಗರ ಪರಿಷತ್ ಸೇರಿದಂತೆ 413 ಪುರಸಭೆಗಳಿಗೆ ಜುಲೈ 6 ಮತ್ತು 13 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.
ಮೊದಲ ಹಂತದಲ್ಲಿ 11 ನಗರ ಪಾಲಿಕೆ ನಿಗಮ, 36 ನಗರ ಪಾಲಿಕೆಗಳು ಮತ್ತು 86 ನಗರ ಪರಿಷತ್‌ಗಳಲ್ಲಿ ಮತದಾನ ನಡೆದಿತ್ತು. ಈ ಚುನಾವಣೆಗಳ ಮತ ಎಣಿಕೆ ಭಾನುವಾರ ಬೆಳಗ್ಗೆ 9 ಗಂಟೆಗೆ ಆರಂಭವಾಯಿತು.
ಮೊದಲ ಹಂತದಲ್ಲಿ ಬುರ್ಹಾನ್‌ಪುರ, ಸತ್ನಾ, ಖಾಂಡ್ವಾ, ಸಾಗರ್, ಉಜ್ಜಯಿನಿ, ಸಿಂಗ್ರೌಲಿ, ಜಬಲ್‌ಪುರ್, ಗ್ವಾಲಿಯರ್, ಛಿಂದ್ವಾರಾ, ಇಂದೋರ್ ಮತ್ತು ಭೋಪಾಲ್‌ನಲ್ಲಿ ಮೇಯರ್ ಹುದ್ದೆಗೆ ಚುನಾವಣೆ ನಡೆದಿತ್ತು.
ಎರಡನೇ ಹಂತದ ಚುನಾವಣಾ ಮತ ಎಣಿಕೆ ಕಾರ್ಯ ಜುಲೈ 20 ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.