ಇಂದೋರ್: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಅಕ್ಷಯ್ ಕಾಂತಿ ಬಮ್ ಮತ್ತು ಅವರ ತಂದೆ ಕಾಂತಿಲಾಲ್ ಅವರಿಗೆ ಕೊಲೆ ಯತ್ನ ಪ್ರಕರಣವೊಂದರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಬಮ್ ಅವರು, ನಾಮಪತ್ರ ಹಿಂಪಡೆಯುವ ಕಡೆಯ ದಿನ ಕಣದಿಂದ ಹಿಂದೆ ಸರಿದಿದ್ದರು. ನಂತರ ಅವರು ಬಿಜೆಪಿ ಸೇರಿದ್ದರು.
ಎಲ್ಲ ಕಡೆಯವರ ವಾದ–ಪ್ರತಿವಾದ ಆಲಿಸಿದ, ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠದ ನ್ಯಾಯಮೂರ್ತಿ ಪ್ರೇಮ್ ನಾರಾಯಣ ಸಿಂಗ್ ಅವರು ಬಮ್ ಮತ್ತು ಕಾಂತಿಲಾಲ್ ಅವರಿಗೆ ಜಾಮೀನು ಮಂಜೂರು ಮಾಡಿದರು.
ಆರೋಪಿಗಳಾದ ಬಮ್ ಮತ್ತು ಕಾಂತಿಲಾಲ್ ಪರವಾಗಿ ವಾದಿಸಿದ್ದ ವಕೀಲ ಅಜಯ್ ಮಿಶ್ರಾ ಅವರು, ‘ಪ್ರಕರಣದಲ್ಲಿ ಆಗಿರುವ 17 ವರ್ಷಗಳ ವಿಳಂಬವನ್ನು ನಾನು ಕೋರ್ಟ್ ಗಮನಕ್ಕೆ ತಂದೆ. ಆರೋಪಿಗಳು ನಗರದಲ್ಲಿ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಅವರು ತಲೆಮರೆಸಿಕೊಳ್ಳುವುದಿಲ್ಲ ಎಂದು ವಿವರಿಸಿದೆ’ ಎಂದು ತಿಳಿಸಿದರು.
ಜಮೀನು ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಯೂಸುಫ್ ಪಟೇಲ್ ಎನ್ನುವವರ ಮೇಲೆ ಬಮ್ ಮತ್ತು ಕಾಂತಿಲಾಲ್ ಅವರು 2007ರ ಅಕ್ಟೋಬರ್‌ನಲ್ಲಿ ದಾಳಿ ನಡೆಸಿದ್ದರು ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.