ಮಂದಸೌರ್: ಮಧ್ಯಪ್ರದೇಶದ ಮಂದಸೌರ್ ಜಿಲ್ಲೆಯಲ್ಲಿ ತನ್ನ ಜಮೀನು ಕಬಳಿಕೆಗೆ ಸಂಬಂಧಿಸಿದಂತೆ ನೀಡಲಾದ ದೂರನ್ನು ಪರಿಹರಿಸಲಿಲ್ಲ ಎಂದು ಬೇಸತ್ತ ರೈತರೊಬ್ಬರು ಜಿಲ್ಲಾಧಿಕಾರಿ ಕಚೇರಿಯ ಆವರಣದ ಸುತ್ತ ‘ಉರುಳು ಸೇವೆ’ ಮಾಡಿ, ಅಸಮಾಧಾನ ಹೊರಹಾಕಿದ್ದಾರೆ.
ವೃದ್ಧ ರೈತರೊಬ್ಬರು ತಮ್ಮ ದೂರನ್ನು ಯಾರೂ ಕೇಳುತ್ತಿಲ್ಲ ಎಂದು ಅಲವತ್ತಿಕೊಂಡು ‘ಉರುಳು ಸೇವೆ’ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ.
‘ಭೂ ಮಾಫಿಯಾದವರು ಅಧಿಕಾರಿಗಳ ಜತೆ ಸೇರಿ ನನ್ನ ಭೂಮಿಯನ್ನು ಕಿತ್ತುಕೊಂಡಿದ್ದಾರೆ. ಮಂಗಳವಾರ ನಡೆದ ಸಾರ್ವಜನಿಕ ಕುಂದುಕೊರತೆ ವೇಳೆ ನನ್ನ ದೂರನ್ನು ಯಾರೂ ಆಲಿಸಲಿಲ್ಲ. ಹೀಗಾಗಿ ಬೇಸತ್ತು, ಪ್ರತಿಭಟನಾ ಸೂಚಕವಾಗಿ ಜಿಲ್ಲಾಧಿಕಾರಿ ಕಚೇರಿ ಸುತ್ತ ಉರುಳುತ್ತಿದ್ದೇನೆ’ ಎಂದು ರೈತ ಶಂಕರ್‌ಲಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ, ಮಂದಸೌರ್ ಜಿಲ್ಲಾಧಿಕಾರಿ ದಿಲೀಪ್ ಯಾದವ್ ಅವರು ಈ ಆರೋಪಗಳನ್ನು ಬುಧವಾರ ಅಲ್ಲಗಳೆದಿದ್ದಾರೆ. ‘ಶಂಕರ್‌ಲಾಲ್ ಅವರ ಜಮೀನನ್ನು ಯಾವುದೇ ವ್ಯಕ್ತಿ ಅಥವಾ ಭೂ ಮಾಫಿಯಾ ಅತಿಕ್ರಮಿಸಿಲ್ಲ. ಕುಂದುಕೊರತೆ ಸಭೆಯಲ್ಲಿ ಅವರು ನೀಡಿದ ದೂರಿನ ಮೇರೆಗೆ, ಉಪವಿಭಾಗೀಯ ಅಧಿಕಾರಿ ಮತ್ತು ತಹಶೀಲ್ದಾರ್ ಅವರಿಂದ ವರದಿ ಕೇಳಲಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.