ಜಬಲ್‌ಪುರ: ಪತಿಯ ಸೋದರನ ಕೊಲೆಗೈದ ಆರೋಪದಡಿ ಇಬ್ಬರು ಮಹಿಳೆಯರು 14 ವರ್ಷ ಸೆರೆವಾಸ ಅನುಭವಿಸಿದ್ದರು. ಆದರೆ ಸುಳ್ಳು ಹೇಳಿಕೆ ಮೂಲಕ ಇವರನ್ನು ಸಿಲುಕಿಸಿದ ಆರೋಪದಡಿ ಸಾಕ್ಷಿಗಳ ವಿರುದ್ಧ ಕ್ರಮಕ್ಕೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶಿಸಿದೆ.
ಸೂರಜ್ ಬಾಯಿ ಎಂಬುವವರು ತಮ್ಮ ಪತಿಯ ಸೋದರನನ್ನು ಕೊಲೆ ಮಾಡಿ, ಸಂಬಂಧಿಯಾದ ಭೂರಿ ಬಾಯಿ ನೆರವಿನೊಂದಿಗೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾಣುವಂತೆ ತೂಗುಹಾಕಿದ್ದರು ಎಂಬ ಆರೋಪವು ಈ ಇಬ್ಬರ ವಿರುದ್ಧ ಸಾಬೀತಾಗಿತ್ತು. ಇದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸೂರಜ್ ಬಾಯಿ ಹಾಗೂ ಭೂರಿ ಬಾಯಿ 14 ವರ್ಷಗಳ ಕಾಲ ಸೆರೆವಾಸವನ್ನೂ ಅನುಭವಿಸಿದ್ದರು.
ಆದರೆ, ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವುದಾಗಿ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜಿ. ಎಸ್. ಅಹಲುವಾಲಿಯಾ ಹಾಗೂ ನ್ಯಾ. ವಿಶಾಲ್ ಮಿಶ್ರಾ ಅವರಿದ್ದ ವಿಭಾಗೀಯ ಪೀಠವು, ‘ವಿಚಾರಣಾ ನ್ಯಾಯಾಲವು ಇದನ್ನು ಅತ್ಯಂತ ಸಾಮಾನ್ಯ ಪ್ರಕರಣ ಎಂದು ಪರಿಗಣಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಯಾವುದೇ ವ್ಯಕ್ತಿಯ ಬದುಕು ಹಾಗೂ ಸ್ವಾತಂತ್ರ್ಯದೊಂದಿಗೆ ವ್ಯವಹರಿಸುವಾಗ ನ್ಯಾಯಾಲಯವು ಕಾನೂನಿನ ಘನತೆಯನ್ನು ಅರಿತು ಶಿಕ್ಷೆ ವಿಧಿಸಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಹಿಂದುಮುಂದು ನೋಡದೆ ಒಪ್ಪಿಕೊಳ್ಳುವುದು ಒಳ್ಳೆಯ ನ್ಯಾಯಧಾನ ವಿಧಾನವಲ್ಲ. ಈ ಪ್ರಕರಣದಲ್ಲಿ ಸಾಕ್ಷಿಗಳನ್ನು ಸರಿಯಾಗಿ ವಿಚಾರಣೆ ನಡೆಸದ ಕಾರಣ, ಇಬ್ಬರು ಅಮಾಯಕ ಮಹಿಳೆಯರು ಅನವಶ್ಯಕವಾಗಿ ಶಿಕ್ಷೆ ಅನುಭವಿಸಿದಂತಾಗಿದೆ. ಹೀಗಾಗಿ ಸುಳ್ಳು ಸಾಕ್ಷಿ ಹೇಳಿದವರ ವಿರುದ್ಧ ವಿಚಾರಣೆ ಆರಂಭಿಸುವಂತೆ ಶಿಕ್ಷೆ ವಿಧಿಸಿದ ನ್ಯಾಯಾಲಯಕ್ಕೆ ಪೀಠ ನಿರ್ದೇಶಿಸಿತು.
2008ರ ಸೆ. 21ರಂದು ಹರಿ ಅಕಾ ಭಾಗ್ಗು ಎಂಬುವವರ ಹತ್ಯೆ ಆಗಿತ್ತು. ಇವರ ವಿರುದ್ಧ ಒಟ್ಟು 11 ಸಾಕ್ಷಿಗಳು ಪ್ರಾಸಿಕ್ಯೂಷನ್ ಪರ ಹೇಳಿಕೆ ನೀಡಿದ್ದರು. 2010ರ ಡಿ. 23ರಂದು ಈ ಇಬ್ಬರು ಮಹಿಳೆಯರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.