ADVERTISEMENT

ನ್ಯಾಯಾಲಯದ ಆದೇಶಗಳನ್ನು ತಿರುಚಿದ ಆರೋಪ: ಐಎಎಸ್‌ ಅಧಿಕಾರಿ ಬಂಧನ

ಪಿಟಿಐ
Published 11 ಜುಲೈ 2021, 10:16 IST
Last Updated 11 ಜುಲೈ 2021, 10:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂದೋರ್‌: ‘ಮಹಿಳೆಯೊಬ್ಬರ ವಿರುದ್ಧದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಹೊರಡಿಸಿದ ಆದೇಶಗಳನ್ನು ತಿರುಚಿದ ಆರೋಪದಡಿ ಐಎಎಸ್‌ ಅಧಿಕಾರಿಯೊಬ್ಬರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

‘ದೌರ್ಜನ್ಯ ಪ್ರಕರಣದಲ್ಲಿ ಅಧಿಕಾರಿಯನ್ನು ಖುಲಾಸೆಗೊಳಿಸಿದೆ ಎಂದು ಹೇಳುವ ನ್ಯಾಯಾಲಯದ ನಕಲಿ ಆದೇಶವನ್ನು ಬಳಸಿ ಅಧಿಕಾರಿ ರಾಜ್ಯ ಆಡಳಿತ ಸೇವೆಯಿಂದ ಐಎಎಸ್‌ ಅಧಿಕಾರಿಯಾಗಿ ಬಡ್ತಿಯನ್ನು ಪಡೆದಿದ್ದಾರೆ’ ಎಂದು ಅವರು ಹೇಳಿದರು.

‘ಭೋಪಾಲ್‌ ನಗರದ ಆಡಳಿತ ಮತ್ತು ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ನೇಮಕಗೊಂಡಿರುವ ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಅವರನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಮೋಟ್ವಾನಿ ಮಾಹಿತಿ ನೀಡಿದರು.

ADVERTISEMENT

ಈ ಸಂಬಂಧ ಜಿಲ್ಲಾ ನ್ಯಾಯಾಲಯದ ವಿಶೇಷ ನ್ಯಾಯಧೀಶರು ಜೂನ್‌ 26ರಂದು ಇಂದೋರ್‌ನ ಎಂ.ಜಿ. ರೋಡ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‘2020ರ ಅಕ್ಟೋಬರ್‌ 6ರಂದು ಎರಡು ನಕಲಿ ಆದೇಶಗಳನ್ನು ಸ್ಥಳೀಯ ನ್ಯಾಯಾಲಯದ ವಿಶೇಷ ನ್ಯಾಯಾಧೀಶರ ಹೆಸರಿನಲ್ಲಿ ಸಿದ್ಧಪಡಿಸಲಾಗಿದೆ. ಸಂತೋಷ್ ವರ್ಮಾ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ ಎಂದು ಒಂದು ಆದೇಶ ಹೇಳಿದೆ. ಮತ್ತೊಂದು ಆದೇಶವು ಸಂತ್ರಸ್ತೆ ಮತ್ತು ಆರೋಪಿ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ಹೇಳಿದೆ.

‘ಈ ಆದೇಶಗಳನ್ನು ಅಕ್ಟೋಬರ್‌ 6, 2020ರಂದು ಹೊರಡಿಸಲಾಗಿದೆ ಎಂದು ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ನಾನು ಆ ದಿನ ರಜೆಯಲ್ಲಿ ಇದ್ದೆ’ ಎಂದು ವಿಶೇಷ ನ್ಯಾಯಧೀಶರು ದೂರಿನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.