ಮಧ್ಯಪ್ರದೇಶ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ವ್ಯಕ್ತಿಯೊಬ್ಬರ ಮೇಲೆ ಜನರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ವ್ಯಕ್ತಿ ತೀವ್ರಗಾಯಗೊಂಡ ಘಟನೆ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಪ್ರಕರಣ ಸಂಬಂಧ 13 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರವಾದಿ ಮಹಮ್ಮದ್ ಕುರಿತು ವಿವಾದಿತ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದರೆನ್ನುವ ಕಾರಣಕ್ಕೆ ಆಯುಷ್ ಜಾದಮ್ (25) ಎನ್ನುವವರ ಮೇಲೆ ದಾಳಿ ನಡೆದಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಎಸ್‌ಪಿ ರಾಕೇಶ್ ಸಾಗರ್ ತಿಳಿಸಿದ್ದಾರೆ.
ತಲೆಗೆ ಪೆಟ್ಟು ಬಿದ್ದಿರುವ ಜಾದಮ್ ಚೇತರಿಸಿಕೊಳ್ಳುತ್ತಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳೆಲ್ಲರೂ ಅಗರ್ ಮಾಲ್ವಾದ ನಿವಾಸಿಗಳು ಎಂದು ದೂರುದಾರ ಅಶುತೋಷ್ ಸೋನಿ ತಿಳಿಸಿದ್ದಾರೆ. ಬಂಧಿತರ ಹೆಸರು ಬಹಿರಂಗಪಡಿಸಲು ಅಗರ್ ಮಾಲ್ವಾ ಕೊಠ್ವಾಲಿ ಠಾಣೆ ಪ್ರಭಾರ ಅಧಿಕಾರಿ ಹರೀಶ್ ಜೆಜುರಿಕರ್ ನಿರಾಕರಿಸಿದ್ದಾರೆ.
ಘಟನೆ ಖಂಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಬಲಪಂಥೀಯ ಸಂಘಟನೆಗಳ ಮುಖಂಡರು ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.