ಇಂದೋರ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥರಾಗಿದ್ದ ಎಂ.ಎಸ್.ಗೋಲ್ವಾಲ್ಕರ್ ವಿರುದ್ಧ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಘದ ಕಾರ್ಯಕರ್ತ ಹಾಗೂ ವಕೀಲ ರಾಜೇಶ ಜೋಶಿ ಎಂಬುವವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತುವುದು, ಮಾನಹಾನಿ, ಸಾರ್ವಜನಿಕ ಸ್ಥಳ ದುರ್ಬಳಕೆ ಆರೋಪಗಳು ದಿಗ್ವಿಜಯ ಸಿಂಗ್ ವಿರುದ್ಧ ದಾಖಲಾಗಿವೆ.
ಫೇಸ್‌ಬುಕ್‌ನಲ್ಲಿ ಗೋಲ್ವಾಲ್ಕರ್ ವಿರುದ್ಧದ ಹೇಳಿಕೆಯ ಪೋಸ್ಟ್ ಅನ್ನು ದಿಗ್ವಿಜಯ ಸಿಂಗ್ ಅವರು ಹಂಚಿಕೊಂಡಿದ್ದರು. ಇದರಿಂದ ದಲಿತರು, ಹಿಂದುಳಿದ ವರ್ಗ, ಮುಸ್ಲಿಂ ಹಾಗೂ ಹಿಂದೂಗಳ ನಡುವೆ ಪರಸ್ಪರ ದ್ವೇಷ ಭಾವನೆ ಮೂಡಲಿದೆ. ಜತೆಗೆ ಹಿಂದೂಗಳ ಭಾವನೆಗೆ ಮತ್ತು ಆರ್‌ಎಸ್‌ಎಸ್‌ನ ಕಾರ್ಯಕರ್ತರ ನಂಬಿಕೆಗಳಿಗೆ ಧಕ್ಕೆ ತಂದಿದೆ ಎಂದು ಜೋಶಿ ತಮ್ಮ ದೂರಿನಲ್ಲಿ ಹೇಳಿದ್ದಾರೆ.
‘ದಲಿತರು, ಹಿಂದುಳಿದವರ್ಗ, ಮುಸ್ಲಿಮರಿಗೆ ಸಮಾನ ಹಕ್ಕು ನೀಡುವ ಬದಲು ಬ್ರಿಟಿಷ್ ಆಡಳಿತದಲ್ಲಿ ಇರುವುದೇ ಲೇಸು’ ಎಂದು ಗೋಲ್ವಾಲ್ಕರ್ ಹೇಳಿದ್ದರು ಎಂಬ ಮಾಹಿತಿಯನ್ನು ದಿಗ್ವಿಜಯ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಆರ್‌ಎಸ್‌ಎಸ್ ಪ್ರಚಾರ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್, ‘ಆಧಾರ ರಹಿತ ಹೇಳಿಕೆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ದಿಗ್ವಿಜಯ ಸಿಂಗ್ ಕದಡುತ್ತಿದ್ದಾರೆ. ಸಮಾಜವನ್ನು ಒಡೆಯುವ ಇಂಥ ಹೇಳಿಕೆಗಳನ್ನು ‘ಗುರೂಜಿ‘ (ಗೋಲ್ವಾಲ್ಕರ್) ಎಂದೂ ನೀಡಿಲ್ಲ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.