ನವದೆಹಲಿ: ವಿವಿಧ ದೇಶಗಳಲ್ಲಿ ಎಂಪಾಕ್ಸ್ (ಮಂಕಿಪಾಕ್ಸ್) ಸೋಂಕು ವ್ಯಾಪಿಸುತ್ತಿರುವುದರಿಂದ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದೆ.
ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲೂ ಜಾಗರೂಕತೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದೆ. ವಿದೇಶಗಳಿಂದ ಬರುವವರಲ್ಲಿ ಎಂಪಾಕ್ಸ್ ಸೋಂಕಿನ ಲಕ್ಷಣಗಳು ಇವೆಯೇ ಎಂಬ ಬಗ್ಗೆ ನಿಗಾ ವಹಿಸುವಂತೆ ಹೇಳಿದೆ.
ದೇಶದಲ್ಲಿ ಇದುವರೆಗೆ ಎಂಪಾಕ್ಸ್ ಸೋಂಕು ಎಲ್ಲೂ ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಎಂಪಾಕ್ಸ್ ಸೋಂಕು ದೃಢಪಟ್ಟರೆ ಅವರ ಪ್ರತ್ಯೇಕವಾಸ ಮತ್ತು ಚಿಕಿತ್ಸೆಗಾಗಿ ನವದೆಹಲಿಯ ರಾಮ ಮನೋಹರ್ ಲೋಹಿಯಾ, ಸಫ್ದರ್‌ಜಂಗ್ ಮತ್ತು ಲೇಡಿ ಹಾರ್ಡಿಂಗ್ ಆಸ್ಪತ್ರೆಗಳನ್ನು ನೋಡಲ್ ಕೇಂದ್ರಗಳಾಗಿ ಗುರುತಿಸಿದೆ. ಇದೇ ರೀತಿಯ ನೋಡಲ್ ಕೇಂದ್ರಗಳನ್ನು ಗುರುತಿಸುವಂತೆ ಎಲ್ಲ ರಾಜ್ಯಗಳಿಗೂ ಸೂಚಿಸಿದೆ.
ಪಾಕಿಸ್ತಾನದಲ್ಲಿ ಮತ್ತೊಬ್ಬರಿಗೆ ‘ಎಂ–ಪಾಕ್ಸ್’
ಇಸ್ಲಾಮಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಂಕಿ–ಪಾಕ್ಸ್ (ಎಂ–ಪಾಕ್ಸ್) ಲಕ್ಷಣ ಇರುವ ಮತ್ತೊಬ್ಬ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದ್ದು, ಈ ರೋಗದ ಶಂಕೆ ಇರುವವರ ಸಂಖ್ಯೆ ನಾಲ್ಕಕ್ಕೆ ಏರಿದಂತೆ ಆಗಿದೆ.
ದಕ್ಷಿಣ ಅರೇಬಿಯಾಗೆ ಇತ್ತೀಚೆಗೆ ಪ್ರವಾಸ ಮಾಡಿ ಮರಳಿದ್ದ 47 ವರ್ಷದ ವ್ಯಕ್ತಿಗೆ ಮಂಕಿ–ಪಾಕ್ಸ್ ಇರುವುದಾಗಿ ಶಂಕಿಸಲಾಗಿದೆ ಎಂದು ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸನ್ ವೈದ್ಯ ಡಾ. ನಸೀಮ್ ಅಖ್ತರ್ ಸೋಮವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.