ನವದೆಹಲಿ: ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿರುವ ನೂತನ ಸಂಸತ್‌ಭವನದಲ್ಲಿ ಸೈಬರ್ ಭದ್ರತೆ ಬಗ್ಗೆ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ ಸೈಬರ್ ದಾಳಿಯಿಂದ ಸಾರ್ವಜನಿಕರ ಆರ್ಥಿಕ ಆಸ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮ ವಹಿಸುವಂತೆ ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ.
ರಾಜ್ಯಸಭಾದಲ್ಲಿ ನಡೆದ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ನಿರ್ವಹಣಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡ ಸಂಸದರು, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ಅಧಿಕಾರಿಗಳು ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಎಎಪಿ ಸಂಸದ ಎನ್.ಡಿ.ಗುಪ್ತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ‘ದೇಶವ್ಯಾಪಿ ಸೈಬರ್ ಭದ್ರತೆ ಕುರಿತು ಜಾಗೃತಿ ಮೂಡಿಸಬೇಕು. ಸೈಬರ್ ಪ್ರಜ್ಞೆ ಸೂಚ್ಯಂಕವನ್ನು ಅಭಿವೃದ್ಧಿಪಡಿಸಿ ಅದನ್ನು ನಿರಂತರವಾಗಿ ಪರಿಶೀಲಿಸಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸೈಬರ್ ಭದ್ರತೆ ಹೆಚ್ಚಿಸುವ ಕುರಿತು ಹಾಗೂ ಹೊಸ ಸಂಸತ್ ಭವನವನ್ನು ಸೈಬರ್ ದಾಳಿಯಿಂದ ಭದ್ರಪಡಿಸುವ ಕುರಿತು ಪಟ್ಟಿ ಮಾಡಲಾಯಿತು.
ಸೈಬರ್ ದಾಳಿ ಎದುರಿಸಲು ಅಗತ್ಯವಿರುವ ನಿಯಂತ್ರಣ ಚೌಕಟ್ಟು ಹಾಗೂ ಕೈಗೊಂಡ ಕ್ರಮಗಳ ಕುರಿತು ಆರ್ಥಿಕ ಸೇವೆಗಳ ಇಲಾಖೆಯ ಕಾರ್ಯದರ್ಶಿ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಪ್ರತಿನಿಧಿಗಳೊಂದಿಗೆ ಸಂಸದರು ಚರ್ಚಿಸಿದರು. ಸೈಬರ್ ಭದ್ರತೆ, ಡಿಜಿಟಲ್ ಗುರುತು ಹಾಗೂ ಪಾವತಿ ಇನ್ನಷ್ಟು ಸುಭದ್ರಗೊಳಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದರು.
ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಎದುರಿಸುವ ಮೂಲಕ ಸಾರ್ವಜನಿಕರ ಆರ್ಥಿಕ ಮಾಹಿತಿ ಹಾಗೂ ಆಸ್ತಿಗಳನ್ನು ರಕ್ಷಿಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಖಾಸಗಿ ಬ್ಯಾಂಕ್ ಹಾಗೂ ಇತರ ಇಲಾಖೆಗಳ ಅಧಿಕಾರಿಗಳನ್ನೂ ಕರೆದು ಚರ್ಚಿಸುವ ಹಾಗೂ ಮುಂಬೈನಲ್ಲಿರುವ ಹಲವು ಬ್ಯಾಂಕ್‌ಗಳ ಮುಖ್ಯ ಕಚೇರಿಗೆ ಭೇಟಿ ನೀಡಿ ಪರಿಶೀಲಿಸುವ ನಿರ್ಧಾರವನ್ನು ಸಮಿತಿ ತೆಗೆದುಕೊಂಡಿತು.
ಹೊಸ ಸಂಸತ್ ಭವನದಲ್ಲಿ ಸಂಸದರ ಭದ್ರತೆ ಕುರಿತು ತೆಗೆದುಕೊಂಡ ಕ್ರಮಗಳ ಸಂಸದರು ತೋರಿದ ಕಾಳಜಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.