ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವಿಚಾರವು ದೇಶದ ರೈತರನ್ನು ಗರಿಷ್ಠ ಮಟ್ಟದಲ್ಲಿ ಸಂಕಷ್ಟಕ್ಕೆ ನೂಕಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕೇಂದ್ರ ಬಜೆಟ್ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಗುರುವಾರ ಆರೋಪಿಸಿದ್ದಾರೆ.
ರಾಜ್ಯಸಭೆ ಸದಸ್ಯರಾಗಿರುವ ರಣದೀಪ್, ಬಜೆಟ್ ಮೇಲಿನ ಚರ್ಚೆ ವೇಳೆ ಸಂಸತ್ತಿನಲ್ಲಿ ಮಾತನಾಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರೈತರು, ಬಡವರು ಮತ್ತು ಯುವಕರು ಎನ್ನುತ್ತಾ ಬಜೆಟ್ ಮಂಡನೆ ಆರಂಭಿಸಿದಾಗ ಇಡೀ ದೇಶ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿತ್ತು. ಆದರೆ, ಇದು ಸರ್ಕಾರ ಉಳಿಸಿಕೊಳ್ಳುವ, ಮಿತ್ರ ಪಕ್ಷಗಳನ್ನು ಮೆಚ್ಚಿಸುವ ಹಾಗೂ ಸೋಲಿಗೆ ಸೇಡು ತೀರಿಸಿಕೊಳ್ಳುವ ಬಜೆಟ್ ಎಂಬುದು ಕೆಲವೇ ನಿಮಿಷಗಳನ್ನು ಸ್ಪಷ್ಟವಾಯಿತು ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿದ್ದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯನ್ನು ಉಲ್ಲೇಖಿಸಿದ ಸುರ್ಜೇವಾಲಾ, ಕಳೆದ 10 ವರ್ಷಗಳಿಂದ ದೇಶದ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಂದುವರಿದು, 'ಎಂಎಸ್‌ಪಿ ಘೋಷಿಸಲಾಗುತ್ತದೆ. ಆದರೆ, ಅದರಂತೆ ಸಾಕಷ್ಟು ಪ್ರಮಾಣದಲ್ಲಿ ಖರೀದಿ ನಡೆಯುವುದಿಲ್ಲ' ಎಂದಿರುವ ಸುರ್ಜೇವಾಲಾ, 'ಬಿಜೆಪಿ ಹಾಗೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಎಂಎಸ್‌ಪಿಯು ರೈತರನ್ನು ಗರಿಷ್ಠ ಪ್ರಮಾಣದಲ್ಲಿ ಸಂಕಷ್ಟಕ್ಕೆ ತಳ್ಳಿದೆ' ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ, 2022–23ರಲ್ಲಿ ಉತ್ಪಾದನೆಯಾದ 1,068 ಲಕ್ಷ ಟನ್ ಗೋಧಿಯ ಶೇ 18ರಷ್ಟನ್ನು ಅಂದರೆ 187.92 ಲಕ್ಷ ಟನ್‌ನಷ್ಟು ಮಾತ್ರವೇ ಸರ್ಕಾರ ಖರೀದಿಸಿದೆ ಎಂದು ಉಲ್ಲೇಖಿಸಿ, 'ಇದು ನಾಚಿಕೆಗೇಡು' ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವು, ಕೃಷಿ ಕ್ಷೇತ್ರಕ್ಕೆ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸುತ್ತದೆ. ಆದರೆ, ಅದಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡುವುದಿಲ್ಲ. ಕಳೆದ 10 ವರ್ಷಗಳಲ್ಲಿ ಪ್ರಮುಖ 6 ದೊಡ್ಡ ಯೋಜನೆಗಳ ಮೇಲೆ ಮಾಡಬೇಕಿದ್ದ ₹ 3 ಲಕ್ಷ ಕೋಟಿ ಮೊತ್ತ ಬಾಕಿ ಇದೆ ಎಂದು ಆರೋಪಿಸಿದ್ದಾರೆ.
ಈ ಸರ್ಕಾರದ ಅವಧಿಯಲ್ಲಿ ತೈಲ ದರ ಏರಿಕೆ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ವೆಚ್ಚಗಳು ಹೆಚ್ಚಾಗುತ್ತಿವೆ. ಯೂರಿಯಾ ಚೀಲಗಳ ತೂಕವನ್ನು 50 ಕೆ.ಜಿ. ಬದಲು 45 ಕೆ.ಜಿ.ಗೆ ಇಳಿಸಲಾಗಿದೆ ಎಂದೂ ಚಾಟಿ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.