ಲಖನೌ: ತಮ್ಮ ತಂದೆ ಮುಖ್ತಾರ್ ಅನ್ಸಾರಿ (63) ಅವರಿಗೆ ಜೈಲಿನಲ್ಲಿ ವಿಷ ನೀಡಲಾಗುತ್ತಿತ್ತು ಎಂದು ಉಮರ್ ಅನ್ಸಾರಿ ಹೇಳಿದ್ದಾರೆ.
ಮುಖ್ತಾರ್ ಅನ್ಸಾರಿ, ಉತ್ತರ ಪ್ರದೇಶದ ಬಾಂಡಾ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ನಿಧನರಾಗಿದ್ದಾರೆ.
ಉಮರ್ ಅನ್ಸಾರಿ ಮಾಡಿರುವ ಆರೋಪಗಳನ್ನು ಅಧಿಕಾರಿಗಳು ಅಲ್ಲಗಳೆದಿದ್ದಾರೆ.
'ಪ್ರಜ್ಞಾಹೀನ' ಸ್ಥಿತಿಯಲ್ಲಿದ್ದ ಅನ್ಸಾರಿ ಅವರನ್ನು ಜಿಲ್ಲಾ ಕಾರಾಗೃಹದಿಂದ ಬಾಂಡಾದಲ್ಲಿರುವ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿತ್ತು. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಸುನೀಲ್ ಕೌಶಲ್ ಗುರುವಾರ ತಿಳಿಸಿದ್ದರು.
63 ವರ್ಷದ ಅನ್ಸಾರಿ ಮಾಊ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2005ರಿಂದ ಉತ್ತರ ಪ್ರದೇಶ ಹಾಗೂ ಪಂಜಾಬ್‌ನಲ್ಲಿ ಸೆರೆವಾಸದಲ್ಲಿದ್ದ ಅನ್ಸಾರಿ ವಿರುದ್ಧದ 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಉತ್ತರ ಪ್ರದೇಶದ ವಿವಿಧ ಕೋರ್ಟ್‌ಗಳು ಎಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಿದ್ದರಿಂದ, 2022ರ ಸೆಪ್ಟೆಂಬರ್‌ನಿಂದ ಬಾಂಡಾ ಜೈಲಿನಲ್ಲಿದ್ದರು. ಕಳೆದ ವರ್ಷ ಉತ್ತರ ಪ್ರದೇಶ ಪೊಲೀಸರು ಪ್ರಕಟಿಸಿದ್ದ 66 ಗ್ಯಾಂಗ್‌ಸ್ಟರ್‌ಗಳ ಪಟ್ಟಿಯಲ್ಲಿ ಅನ್ಸಾರಿ ಹೆಸರೂ ಇತ್ತು.
'ತಮಗೆ 'ವಿಷ ನೀಡಲಾಗುತ್ತಿದೆ' ಎಂದು ನನ್ನ ತಂದೆ ಕಳವಳ ವ್ಯಕ್ತಪಡಿಸಿದ್ದರು' ಎಂಬುದಾಗಿ ಮಾಧ್ಯಮದವರಿಗೆ ಹೇಳಿರುವ ಉಮರ್ ಅನ್ಸಾರಿ, ಈ ವಿಚಾರ ಇಡೀ ದೇಶಕ್ಕೆ ಗೊತ್ತಿದೆ ಎಂದಿದ್ದಾರೆ.
'ಮರಣೋತ್ತರ ಪರೀಕ್ಷೆ ಯಾವಾಗ ನಡೆಯಲಿದೆ ಎಂಬ ಮಾಹಿತಿ ಇಲ್ಲ. ಇಂದು ರಾತ್ರಿಯೇ ಶವ ಪರೀಕ್ಷೆ ನಡೆಸಿ, ಬೆಳಿಗ್ಗೆ ಶವ ನೀಡಬಹುದು ಎಂಬ ವಿಶ್ವಾಸವಿದೆ. ಅಧಿಕಾರಿಗಳು ಏಕೆ ವಿಳಂಬ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ' ಎಂದು ಮೃತ ಅನ್ಸಾರಿ ಸಹೋದರ ಸಿಬ್ಗಾತ್‌ಉಲ್ಲಾ ಅನ್ಸಾರಿ ಗುರುವಾರ ಹೇಳಿದ್ದರು.
'ವಿಷ ನೀಡಲಾಗುತ್ತಿತ್ತು' ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿಬ್ಗಾತ್‌ಉಲ್ಲಾ, 'ಮುಖ್ತಾರ್, ವಕೀಲರ ಮೂಲಕ ಪತ್ರ ಬರೆದು ಕೋರ್ಟ್‌ಗೆ ಈ ಬಗ್ಗೆ ತಿಳಿಸಿದ್ದ' ಎಂದಿದ್ದಾರೆ.
ಮುಖ್ತಾರ್ ಅನ್ಸಾರಿ ಅವರ ಮತ್ತೊಬ್ಬ ಸಹೋದರ ಹಾಗೂ ಗಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಅವರೂ, ಮಂಗಳವಾರ (ಮಾರ್ 26 ರಂದು) ಇದೇ ರೀತಿಯ ಆರೋಪ ಮಾಡಿದ್ದರು.
ಮುಖ್ತಾರ್ ನಿವಾಸದ ಸುತ್ತ ಬಿಗಿಭದ್ರತೆ, ರಾಜ್ಯದಾದ್ಯಂತ ನಿಷೇಧಾಜ್ಞೆ
ಮುಖ್ತಾರ್ ನಿಧನದ ಹಿನ್ನೆಲೆಯಲ್ಲಿ ಅವರ ನಿವಾಸ ಹಾಗೂ ಆಸ್ಪತ್ರೆಯ ಸುತ್ತ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ. ಭಾರಿ ಸಂಖ್ಯೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144 ಅಡಿ ರಾಜ್ಯದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಾಂಡಾ, ಮಾಊ, ಗಾಜಿಪುರ ಹಾಗೂ ವಾರಾಣಸಿ ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.
ಬಾಂಡಾದಲ್ಲಿ ಶವಪರೀಕ್ಷೆ ನಡೆಯಲಿದ್ದು, ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗುವುದು ಎಂದು ಲಖನೌನಲ್ಲಿರುವ ಪೊಲೀಸ್ ಪ್ರಧಾನ ಕಚೇರಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.