ಪ್ರಯಾಗ್‍ರಾಜ್: ಕುಂಭಮೇಳಕ್ಕೆ ಸಜ್ಜಾಗಿರುವ ಪ್ರಯಾಗ್‍ರಾಜ್ ಈಗ ಅಕ್ಷರಶಃಕೇಸರಿಮಯ. ಅಲ್ಲಿರುವ ಸಾಧು ಸಂತರ ನಡುವೆ ಬಿಳಿ ಟೋಪಿ ಧರಿಸಿ, ಬಿಳಿ ಗಡ್ಡದ ವ್ಯಕ್ತಿಯೊಬ್ಬರು ಕಾಣಲುಸಿಗುತ್ತಾರೆ. ಈ ವ್ಯಕ್ತಿಯ ಅಂಗಡಿ ಮುಂದೆ ಮುಲ್ಲಾ ಜೀ, ಲೈಟ್ ವಾಲೇ ( ಮುಲ್ಲಾ ಜೀ, ಲೈಟ್ ಮ್ಯಾನ್) ಎಂಬ ಬೋರ್ಡ್ ಇದೆ.ಕುಂಭಮೇಳದಲ್ಲಿ ಈ ಮುಲ್ಲಾ ಜೀ ಅವರದ್ದು ಏನು ಕೆಲಸ? ಎಂದು ಅಚ್ಚರಿಪಡಬೇಡಿ.ಕುಂಭಮೇಳದಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ಈ ಮುಲ್ಲಾ ಜೀ ಎಂದು ಕರೆಯಲ್ಪಡುವ ಮೊಹಮ್ಮದ್ ಮೆಹಮೂದ್ ಬೇಕೇ ಬೇಕು.
ಪಶ್ಚಿಮ ಉತ್ತರ ಪ್ರದೇಶದ ಮುಜಾಫರ್ ನಗದರ ನಿವಾಸಿಯಾಗಿರುವ ಮೆಹಮೂದ್‍ಗೆ ವಯಸ್ಸು 76. ಜುನಾ ಅಖಾಡಾದ ಸಾಧುಗಳೊಂದಿಗೆ ಈತನಿಗಿರುವ ನಂಟು ಆರಂಭವಾಗಿದ್ದು 1986ರಲ್ಲಿ. ಈ ಸಾಧುಗಳು ತಮ್ಮ ಟೆಂಟ್‍ಗಳಿಗೆ ಬೆಳಕಿನ ವ್ಯವಸ್ಥೆ ಮಾಡಲು ಮೆಹಮೂದ್‍ಗೆ ಹೇಳಿದ್ದರು. ಅಲ್ಲಿಂದ ಇಲ್ಲಿಯವರೆಗೆ ಕುಂಭಮೇಳ ನಡೆಯುವ ಅಲಹಾಬಾದ್ (ಈಗ ಪ್ರಯಾಗ್ ರಾಜ್)ಗೆ 800 ಕಿಮೀನಷ್ಟು ಪ್ರಯಾಣ ಮಾಡಿ ಮೆಹಮೂದ್ ಬರುತ್ತಾರೆ. ಇಲ್ಲಿನ ಸಾಧುಗಳ ಟೆಂಟ್‍ಗಳಿಗೆ ಬೆಳಕಿನ ವ್ಯವಸ್ಥೆ ಮಾಡುವುದಕ್ಕಾಗಿ.
ತಮ್ಮ ಅನುಭವದ ಬಗ್ಗೆ ನ್ಯೂಸ್ 18 ಜತೆ ಮಾತನಾಡಿದ ಮೆಹಮೂದ್, ನಾನೊಬ್ಬ ಇಲೆಕ್ಟ್ರಿಷನ್.ನೀವು ರಾತ್ರಿ ಹೊತ್ತು ಇಲ್ಲಿಗೆ ಬಂದರೆ, ಸಾಧುಗಳ ಟೆಂಟ್‍ಗಳು ಬೆಳಕಿನಲ್ಲಿ ಝಗಮಗಿಸುತ್ತಿರುವುದನ್ನು ಕಾಣಬಹುದು. ಇದೆಲ್ಲವನ್ನೂ ಮಾಡಿದ್ದು ನಾನೇ ಎಂದು ಹೇಳುವಾಗ ಅವರಲ್ಲಿ ಹೆಮ್ಮೆ ಮೂಡುತ್ತದೆ,
ಮುಜಾಫರ್ ನಗರದಲ್ಲಿ ಜನ್ಮಾಷ್ಟಮಿಯಂದು ಆರಂಭವಾಗಿ ಮೀರತ್‍ನಲ್ಲಿ ನಡೆಯುವ ನೌಚಂಡಿ ಮೇಳದ ವರೆಗೆ ಮೆಹಮ್ಮೂದ್ ಬ್ಯುಸಿ ಆಗಿರುತ್ತಾರೆ.
ನಾನು ಮೊದಲ ಬಾರಿ ಕುಂಭಮೇಳದಲ್ಲಿ ಭಾಗವಹಿಸಿದ್ದು 1986ರಲ್ಲಿ, ಹರಿದ್ವಾರದಲ್ಲಿ ನಡೆದಾಗ. ನಾಶಿಕ್‍ನಲ್ಲಿ ನಡೆದಾಗ ಪ್ರತಿ ಕುಂಭಮೇಳದಲ್ಲಿಯೂ ಭಾಗವಹಿಸಿದ್ದೇನೆ. ನಾನು ಇಲ್ಲಿಯವರೆಗೆ ಎಷ್ಟು ಕುಂಭಮೇಳದಲ್ಲಿ ಭಾಗವಹಿಸಿದ್ದೇನೆ ಎಂದು ಲೆಕ್ಕ ಇಟ್ಟಿಲ್ಲ ಅಂತಾರೆ ಈ ಮುಲ್ಲಾ ಜೀ.
ನಾನು ಇವರನ್ನು ಎಲ್ಲ ಕುಂಭ ಮೇಳದಲ್ಲಿ ನೋಡಿದ್ದೇನೆ. ನಾನು ಎಂದಿಗೂ ಅವರ ಹೆಸರು ಕೇಳಲಿಲ್ಲ. ಅವರು ಎಂದಿಗೂ ನಮ್ಮ ಪಾಲಿಗೆ ಮುಲ್ಲಾ ಜೀ, ನಮ್ಮ ಸ್ನೇಹಿತ ಅಂತಾರೆ ಜುನಾ ಅಖಾಡದ ನಾಗ ಬಾಬಾ ಸಂಗಮ್ ಗಿರಿ.
ಹಿಂದೂಗಳ ಪಾಲಿಗೆ ನಾವು ಗುರುಗಳು, ಮುಸ್ಲಿಮರ ಪಾಲಿಗೆ ನಾವು ಪೀರ್‌ಗಳು.ಮುಸ್ಲಿಮರು ನಿರಾಕಾರನಾದ ಭಗವಂತನನ್ನು ನಂಬುತ್ತಾರೆ, ನಾವು ಆಕಾವಿರುವ ಭಗವಂತನನ್ನು. ದಾರಿಗಳು ಬೇರೆ ಬೇರೆಯಾಗಿರಬಹುದು, ಆದರೆ ನಾವೆಲ್ಲರೂ ಒಂದೇ ಸ್ಥಳಕ್ಕೆ ಬಂದು ಸೇರುತ್ತೇವೆ.ಅಲಹಾಬಾದ್‍ಗೆ ತಲುಪಲು 25 ವಿಭಿನ್ನ ದಾರಿಗಳಿವೆ.ರೈಲ್ವೆ ನಿಲ್ದಾಣಕ್ಕೆ ತಲುಪಲು ಜನರು ಬೇರೆ ಬೇರೆ ದಾರಿಗಳನ್ನು ಬಳಸುತ್ತಾರೆ. ಆದರೆ ಕೊನೆಗೆ ಎಲ್ಲರೂ ರೈಲ್ವೆ ನಿಲ್ದಾಣಕ್ಕೆ ಬಂದು ಸೇರುತ್ತಾರೆ ಅಂತಾರೆ ಸಾಧು ಸಂಗಮ್ ಗಿರಿ.
ಸಾಧುಗಳು ನನಗೆ ತುಂಬಾ ಗೌರವ ನೀಡುತ್ತಾರೆ. ಈ ಗೌರವ ನೀಡುವುದು ನಿಂತರೆ, ಅದೇ ನನ್ನ ಕೊನೆಯ ಕುಂಭ ಮೇಳ. ಬಾಬಾಗಳು ನನಗೆ ಇಲ್ಲಿ ನನ್ನ ಮನೆಯದ್ದೇ ಅನುಭವ ನೀಡುತ್ತಾರೆ. ಕೆಲವೊಮ್ಮೆ ಅವರು ಬಳಸುವ ಹಾಸಿಗೆ ಮೇಲೆ ಕುಳಿತುಕೊಳ್ಳುವಂತೆ ಹೇಳುತ್ತಾರೆ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ.ಈ ಸಾಧುಗಳ ಮಧ್ಯದಲ್ಲಿಯೇ ನಾನು ಐದು ಬಾರಿ ನಮಾಜ್ ಮಾಡುತ್ತೇನೆ. ಅದಕ್ಕಾಗಿ ಅವರು ನನಗೆ ಸ್ಥಳವಕಾಶವನ್ನು ನೀಡುತ್ತಾರೆ. ಒಂದು ವೇಳೆ ಈ ಸಾಧುಗಳು ನನ್ನನ್ನು ಬೇರೆಯವ ಎಂದು ದೂರವಿಟ್ಟಿದ್ದರೆ, ನಾನು ಕುಂಭಮೇಳಕ್ಕೆ ಬರುತ್ತಿರಲಿಲ್ಲ.ಕಳೆದ ಮೂರು ದಶಕಗಳಿಂದಕುಂಭಮೇಳ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ ಎನ್ನುವ ಮುಲ್ಲಾ ಜೀ ಅವರಲ್ಲಿಮುಂದಿನ ಕುಂಭಮೇಳಕ್ಕೆ ಬರುತ್ತೀರಾ ಎಂದು ಕೇಳಿದಾಗ, ಇನ್ಶಾ ಅಲ್ಲಾ.. ಅಲ್ಲಾ, ನನಗೆ ಅನುಮತಿ ನೀಡಿದರೆ ನಾನು ಬಂದೇ ಬರುವೆ ಅಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.