ಕಾವೇರಿ ಕನ್ನಡಿಗರ ಪಾಲಿಗೆ ಕೇವಲ ನದಿಯಲ್ಲ. ಪ್ರತಿ ಮನದಲ್ಲಿಯೂ ಆಳವಾಗಿ ಬೇರೂರಿರುವ ಅವ್ಯಕ್ತ ಭಾವ. ಕರ್ನಾಟಕ ಮತ್ತು ತಮಿಳುನಾಡು ನಡುವಣ ನೀರಿಗಾಗಿ ನಡೆಯುವ ಹೋರಾಟಗಳ ಹಿಂದೆ ಕೇವಲ ದಾಹ ಮಾತ್ರವಲ್ಲ, ಆ ಭಾವುಕ ಸೆಳೆತಗಳ ಪ್ರಭಾವದ್ದೇ ದೊಡ್ಡ ಪಾತ್ರ.
ಇದೀಗ ಶತಮಾನದ ಪ್ರವಾಹಕ್ಕೆ ಸಿಕ್ಕಿ ತತ್ತರಿಸಿ ಹೋಗಿರುವ ಕೇರಳವು, ‘ಮುಲ್ಲಪೆರಿಯಾರ್ ಅಣೆಕಟ್ಟು ಸಮರ್ಥವಾಗಿ ನಿರ್ವಹಣೆ ಮಾಡದೆ ಇದ್ದುದೇ ಪ್ರವಾಹಕ್ಕೆ ಕಾರಣ’ ಎಂದು ತಮಿಳುನಾಡಿನ ವಿರುದ್ಧ ಆರೋಪ ಮಾಡುತ್ತಿರುವುದರ ಹಿಂದೆಯೂ ಕಾವೇರಿಯಂತೆಯೇ ಎದೆಗೆ ಹತ್ತಿರವೆನಿಸುವಂತಹದೊಂದು ಕಥೆಯಿದೆ.
ಮುಲ್ಲಪೆರಿಯಾರ್ ಅಣೆಕಟ್ಟೆಯ ಸಂಪೂರ್ಣ ಸಂಗ್ರಹ ಮಟ್ಟ ತಲುಪಿದ ನಂತರ ಏಕಾಏಕಿ ನೀರು ಬಿಟ್ಟಿದ್ದರಿಂದ, ಇಡುಕ್ಕಿ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಯಿತು. ಇದರಿಂದಾಗಿ ಅಣೆಕಟ್ಟೆಯಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಹರಿಯಲು ಬಿಡಬೇಕಾದಒತ್ತಡ ಸೃಷ್ಟಿಯಾಯಿತು. ಇದು ಪ್ರವಾಹ ಪರಿಸ್ಥಿತಿ ಕೈ ಮೀರಲು ಕಾರಣವಾಯಿತು ಎನ್ನುವುದು ಕೇರಳದ ದೂರು. ಈ ವಾದವನ್ನುಪುರಸ್ಕರಿಸಿದ್ದ ಸುಪ್ರೀಂಕೋರ್ಟ್ ಮುಲ್ಲಪೆರಿಯಾರ್‌ನಲ್ಲಿ ನೀರಿನ ಸಂಗ್ರಹಕ್ಕೆ ಮಿತಿ ಹೇರಿತ್ತು.
ಇದನ್ನೂ ಓದಿ...
ಮುಲ್ಲಪೆರಿಯಾರ್ ನೀರಿನ ಸಂಗ್ರಹಕ್ಕೆ ಸುಪ್ರಿಂಕೋರ್ಟ್ ಮಿತಿ
ಆದರೆ, ಕೇರಳದ ವಾದವನ್ನು ಅಲ್ಲಗಳೆದಿರುವ ತಮಿಳುನಾಡು, ಆಗಸ್ಟ್ 15ಕ್ಕೂ ಮೊದಲೇ ನಾವು ಬಾಗಿಲು ತೆರೆದಿದ್ದೇವೆ. ಈ ವೇಳೆ ಸಂಗ್ರಹದ ಗರಿಷ್ಠ ಮಿತಿಯ ಸನಿಹವಿದ್ದ ಕೇರಳದ ಹಲವು ಅಣೆಕಟ್ಟೆಗಳಲ್ಲಿ ಹೆಚ್ಚುವರಿ ನೀರನ್ನು ಹರಿಬಿಡಲಾಗುತ್ತಿತ್ತು ಎಂದು ವಾದಿಸಿತ್ತು. ‘ಆಗಸ್ಟ್ 14–19ರ ಅವಧಿಯಲ್ಲಿ ಇಡುಕ್ಕಿ ಹಾಗೂ ಇದಮಲಯಾರ್ ಅಣೆಕಟ್ಟುಗಳಿಂದ 36 ಟಿಎಂಸಿ ನೀರನ್ನು ಹರಿಬಿಡಲಾಗಿದೆ. ಆದರೆ, ಇದೇ ಅವಧಿಯಲ್ಲಿ 6.65 ಟಿಎಂಸಿ ನೀರು ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ಹರಿದಿದೆ. ಇದನ್ನು ಗಮನಿಸಿದರೆಆ ಎರಡು ಅಣೆಕಟ್ಟೆಗಳಿಂದ ಬಿಡುಗಡೆಯಾಗಿರವ ನೀರಿನ ಪ್ರಮಾಣಕ್ಕೆ ಹೋಲಿಸಿದರೆ ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ಹರಿದ ನೀರು ಏನೇನೂ ಅಲ್ಲ’ ಎಂದು ದಾಖಲೆ ನೀಡಿತ್ತು.
ಜೊತೆಗೆ ‘ಅಣೆಕಟ್ಟೆಯು ಪ್ರವಾಹದ ಹರಿವನ್ನು ನಿಭಾಯಿಸುವಷ್ಟು ಸುರಕ್ಷತವಾಗಿದೆ ಎಂದು ತಜ್ಞರುಹಲವಾರು ಸಂದರ್ಭಗಳಲ್ಲಿ ದೃಢಪಡಿಸಿದ್ದಾರೆ’ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು. ತಮಿಳುನಾಡಿನ ಐದು ಜಿಲ್ಲೆಗಳಿಗೆ ನೀರುಣಿಸುತ್ತಿರುವಮುಲ್ಲಪೆರಿಯಾರ್ ಅಣೆಕಟ್ಟೆ ಭೌಗೋಳಿಕವಾಗಿ ಕೇರಳದ ಇಡುಕ್ಕಿ ಜಿಲ್ಲೆಗೆ ಸೇರಿದೆಯಾದರೂ, ಇದನ್ನು ನಿರ್ವಹಿಸುತ್ತಿರುವುದು ತಮಿಳುನಾಡು ಎಂಬುದು ಮತ್ತೊಂದು ಸ್ವಾರಸ್ಯ. ಇದಕ್ಕೆ ಸಂಬಂಧಿಸಿಂತೆ ತಿರುವಾಂಕೂರ್ ಹಾಗೂ ಮದ್ರಾಸ್ ಸರ್ಕಾರಗಳ ನಡುವೆ 1886ರಲ್ಲಿ ಒಪ್ಪಂದ ಏರ್ಪಟ್ಟಿದೆ. ರೈತರಿಂದ 8000 ಎಕರೆ ಭೂಪ್ರದೇಶವನ್ನು ಪಡೆದು 1887–1895ರ ಅವಧಿಯಲ್ಲಿ ಇದನ್ನು ಕಟ್ಟಲಾಗಿದೆ.
90ರ ದಶಕದಿಂದೀಚೆಗೆ ವಿವಾದ
ನೀರಿನ ಹರಿವಿಗೆ ಸಂಬಂಧಿಸಿದಂತೆ ತೀರಾ ಇತ್ತೀಚಿನ ವರೆಗೆ ಯಾವುದೇ ವಿವಾದಗಳು ಸೃಷ್ಟಿಯಾಗಿರಲಿಲ್ಲ. ಅಣೆಕಟ್ಟೆಯ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಎದ್ದ ಸಂದರ್ಭದಲ್ಲಿ 1979ರ ನವೆಂಬರ್‌ನಲ್ಲಿ ಕೇಂದ್ರ ಜಲ ಆಯೋಗದ ಕೆ.ಸಿ.ಥಾಮಸ್ ನೇತೃತ್ವದಲ್ಲಿ ತ್ರಿಪಕ್ಷೀಯ ಸಭೆ ನಡೆದಿತ್ತು. ಅದುವರೆಗೆ ಇದ್ದ ನೀರು ಸಂಗ್ರಹದ ಮಿತಿಯನ್ನು 152 ಅಡಿಯಿಂದ136ಕ್ಕೆ ಇಳಿಸಲುಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಮುಲ್ಲಪೆರಿಯಾರ್ ಜಲಾಶಯದಿಂದ ಕೇರಳಕ್ಕೆ ದಕ್ಕುವುದು ಅಲ್ಪ ಪ್ರಮಾಣದ ನೀರು ಮಾತ್ರ. ಯಾವ ಸಮಸ್ಯೆಯೂ, ಹೋರಾಟವೂ ಇಲ್ಲದೆ ಶಾಂತಿಯುತ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗಿತ್ತು.
ಆದರೆ, 90ರ ದಶಕದ ನಂತರ ನೀರು ಸಂಗ್ರಹ ಮಿತಿಯನ್ನು ಸಡಿಲಿಸುವಂತೆ ಕೋರಿ ತಮಿಳುನಾಡು ಮನವಿ ಸಲ್ಲಿಸಿತು. ಮಾತುಕತೆ ಸಂದರ್ಭದಲ್ಲಿ ಒಮ್ಮತ ದೊರೆಯದಿದ್ದ ಕಾರಣ, ಸುಪ್ರೀಂಕೋರ್ಟ್ ಕದ ತಟ್ಟಿದತಮಿಳುನಾಡು ನ್ಯಾಯಕ್ಕಾಗಿ ಆಗ್ರಹಿಸಿತು. ಇದಕ್ಕೆ ಸಂಬಂಧಿಸಿದಂತೆ 2006 ಮತ್ತು 2014ರಲ್ಲಿ ತೀರ್ಪು ಪ್ರಕಟಿಸಿದ್ದ ಸುಪ್ರೀಂ, ಸಂಗ್ರಹ ಮಿತಿಯನ್ನು 142 ಅಡಿಗೆ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಿತ್ತು.
ಇದರೊಂದಿಗೆ ಇಲ್ಲಿಗೇ ಮುಗಿಯಬೇಕಿದ್ದ ಸಮಸ್ಯೆಯೊಂದುತೀರ್ಪಿನೊಡನೆ ನಿಜವಾದ ಆರಂಭ ಪಡೆಯಿತು. ಈ ತೀರ್ಪಿನ ಹಿನ್ನಲೆಯಲ್ಲಿಯೇ ಈಗ ಕೇರಳ ಸರ್ಕಾರ ತಮಿಳುನಾಡಿನ ವಿರುದ್ಧ ಹರಿಹಾಯುತ್ತಿರುವುದು. ಕೇರಳದ ಪರಾಂಬಿಕುಲಂ-ಅಲಿಯಾರ್ ಜಲಯೋಜನೆ, ಭವಾನಿ ಉಪನಯನ ಪ್ರದೇಶದಲ್ಲಿ ಹರಿಯುವ ಸಿರುವಾನಿ, ನಯ್ಯಾರ್, ಪಂಬಾ ಮತ್ತು ಚಾಂಕೋವಿಲ್ ನದಿಗಳನ್ನು ತನ್ನ ವೈಯಪ್ಪಾರ್ ನದಿಗೆ ಜೋಡಿಸುವ ಪ್ರಸ್ತಾಪವನ್ನು ತಮಿಳುನಾಡು ಮಾಡಿದೆ. ಇದಕ್ಕೆಲ್ಲ ಕೇರಳದ ಸಹಕಾರ ಬೇಕು.
ಉಭಯ ರಾಜ್ಯಗಳ ನಡುವಣ ನೀರಿನ ವಿವಾದವು ಕರ್ನಾಟಕ–ತಮಿಳುನಾಡು ಕಾವೇರಿ ನದಿ ನೀರಿನ ವಿವಾದಕ್ಕಿಂತಲೂ ಸಂಕೀರ್ಣವಾದದ್ದು ಎನಿಸಿಕೊಳ್ಳುವುದೂ ಇದೇ ಕಾರಣಕ್ಕೆ. ಪ್ರವಾಹ ನಷ್ಟದ ಬಲದೊಂದಿಗೆ ಇದೀಗ ಮತ್ತೆ ಮುಲ್ಲಪೆರಿಯಾರ್ ಅಣೆಕಟ್ಟೆ ವಿವಾದ ರೆಕ್ಕೆ ಬಿಚ್ಚಿಕೊಂಡಿದೆ.
ಸಮಸ್ಯೆಯ ಮೂಲ
ಕೇರಳದಲ್ಲಿ 2012, 2015 ಮತ್ತು 2016ರ ಮುಂಗಾರಿನ ಅವಧಿಯಲ್ಲಿ ಮಾತ್ರ ಮುಂಗಾರು ಚೆನ್ನಾಗಿ ಬಂದಿದೆ. ಉಳಿದ ನಾಲ್ಕು ವರ್ಷಗಳಲ್ಲಿ ಸಾಧಾರಣ ಮಳೆ ಆಗಿದೆಯಾದರೂ, ಎರಡು ವರ್ಷ ರಾಜ್ಯದ ಪರಿಸ್ಥಿತಿ ಏನೇನೂ ಚೆನ್ನಾಗಿರಲಿಲ್ಲ. ಹೀಗಾಗಿ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಆಡಳಿತಗಾರರಲ್ಲಿ ತಲೆನೋವು ಹೆಚ್ಚಾಗಿತ್ತು.
ಕೇರಳದ ಇಡುಕ್ಕಿ ಮತ್ತು ಇದಮಲಯಾರ್ ಜಲಾಶಯಗಳಲ್ಲಿ ಸಾಮಾನ್ಯವಾಗಿ ನೀರಿನ ಸಂಗ್ರಹ ಮಟ್ಟ ಶೇ90 ತಲುಪುತ್ತಿದ್ದಂತೆಯೇ ನೀರು ಹೊರಬಿಡುವ ಪ್ರಕ್ರಿಯೆ ಆರಂಭವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ ಈ ಬಾರಿ ಕೇರಳ ಮಳೆಯನ್ನು ತಪ್ಪಾಗಿ ಅಂದಾಜಿಸಿತು. ‘ಕೇರಳದಲ್ಲಿರುವ 35 ಪ್ರಮುಖ ಜಲಾಶಯಗಳು ಜುಲೈ ಅಂತ್ಯದ ವೇಳೆಗೆ ಸಂಪೂರ್ಣ ಸಂಗ್ರಹ ಮಟ್ಟ ತಲುಪಿದ್ದವು’ ಎಂದು ಆಗಸ್ಟ್ 19ರಂದು ಹವಾಮಾನ ಇಲಾಖೆ ಸಲ್ಲಿಸಿದ್ದ ವರದಿಯೊಂದರಲ್ಲಿ ಉಲ್ಲೇಖವಿದೆ.
ಆಸ್ತಿ ಮಾರಿ ಜಲಾಶಯಕ್ಕೆ ನೆರವಾಗಿದ್ದ ಎಂಜಿನಿಯರ್
120 ವರ್ಷಗಳ ಇತಿಹಾಸ ಹೊಂದಿರುವಮುಲ್ಲಪೆರಿಯಾರ್ ಜಲಾಶಯವನ್ನು ಬ್ರಿಟಿಷ್ ಸೇನೆಯಲ್ಲಿ ಎಂಜಿನಿಯರ್ ಆಗಿದ್ದ ಕರ್ನಲ್ ಜಾನ್ ಪೆನ್ನಿಕ್ವಿಕ್ ಅವರು ನಿರ್ಮಿಸಿದ್ದರು.ಸುಣ್ಣದ ಕಲ್ಲು ಮತ್ತು ಬೃಹತ್ ಕಲ್ಲು ಬಂಡೆಗಳನ್ನು ಬಳಸಿ ಕಟ್ಟಲಾಗಿರುವ ಈ ಅಣೆಕಟ್ಟು ನಿರ್ಮಾಣಕ್ಕಾಗಿ ತಮ್ಮ ಆಸ್ತಿಯನ್ನು ಮಾರಾಟಮಾಡಿದ್ದರು.
ಇದನ್ನೂ ಓದಿ...
ಮುಲ್ಲಪೆರಿಯಾರ್ ಜಲಾಶಯ: ನಿರ್ಮಾತೃ ಸ್ಮಾರಕ
ಸುಮಾರು 2.23 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತಿರುವ ಈ ಜಲಾಶಯವುಥೇಣಿ, ಮಧುರೈ, ದಿಂಡಿಗಲ್, ಶಿವಗಂಗಾ ಮತ್ತು ರಾಮನಾಥಪುರಂ ಜಿಲ್ಲೆಗಳ ಜನರಿಗೆ ಉಪಯುಕ್ತವಾಗಿದೆ. ಅಣೆಕಟ್ಟೆ ಶತಮಾನಕ್ಕೂ ಹೆಚ್ಚು ಹಳೆಯದಾಗಿರುವುದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಹೆಚ್ಚಿದಂತೆ ಅಪಾಯ ಸೃಷ್ಟಿಯಾಗುವ ಬಗ್ಗೆ ಕೇರಳಆಗಾಗ ಆತಂಕ ವ್ಯಕ್ತಪಡಿಸುತ್ತಲೇ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.