ಮುಂಬೈ: ಬುಲೆಟ್ ಟ್ರೈನ್ ಕಾರಿಡಾರ್ ಆಗಿರುವ ಮುಂಬೈ–ಅಹಮದಾಬಾದ್ ನಡುವೆ 28 ಸಿಸ್ಮೊಮೀಟರ್‌ಗಳನ್ನು ಅಳವಡಿಸುವುದಾಗಿ ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರ್ಪೊರೇಷನ್ (NHSRCL) ಸೋಮವಾರ ಹೇಳಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ನಿಗಮವು, ‘ಪ್ರಯಾಣಿಕರ ಸುರಕ್ಷತೆ ಮತ್ತು ಮೂಲಸೌಕರ್ಯದ ಭಾಗವಾಗಿ ಜಪಾನ್‌ನ ಶಿಂಕ್‌ಸೆನ್ ತಂತ್ರಜ್ಞಾನ ಆಧಾರಿತ ಭೂಕಂಪ ಮುನ್ಸೂಚನಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. 28 ಸಿಸ್ಮೊಮೀಟರ್‌ಗಳಲ್ಲಿ 22 ಅನ್ನು ಮಾರ್ಗದಲ್ಲೇ ಅಳವಡಿಸಲಾಗುವುದು. ಇದರಲ್ಲಿ ಮಹಾರಾಷ್ಟ್ರದ ಮುಂಬೈ, ಠಾಣೆ, ವಿರಾರ್ ಹಾಗೂ ಬೊಯ್‌ಸಾರ್‌ನಲ್ಲಿ 8 ಸಾಧನಗಳನ್ನು ಅಳವಡಿಸಲಾಗುವುದು. ಗುಜರಾತ್‌ನ ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಮೆಹಂಬಾದಾದ್ ಹಾಗೂ ಅಹಮದಾಬಾದ್ ನಡುವೆ 14 ಸಾಧನಗಳನ್ನು ಅಳವಡಿಸಲಾಗುವುದು’ ಎಂದು ಹೇಳಿದೆ.
‘ಬಾಕಿ ಉಳಿದ 6 ಉಪಕರಣಗಳನ್ನು ಈ ಮಾರ್ಗದಲ್ಲಿ ಭೂಕಂಪ ಪೀಡಿತ ಪ್ರದೇಶ ಎಂದೇ ಗುರುತಿಸಲಾಗಿರುವ ಮಹಾರಾಷ್ಟ್ರದ ಖೇದ್, ರತ್ನಗಿರಿ, ಲಾತೂರ್ ಹಾಗೂ ಪಂಗ್ರಿ, ಗುಜರಾತ್‌ನ ಅದೇಸರ್, ಹಳೇ ಭುಜ್‌ನಲ್ಲಿ ಅಳವಡಿಸಲಾಗುವುದು’ ಎಂದು ಮಾಹಿತಿ ನೀಡಿದೆ.
‘ಶಿಂಕ್‌ಸೆನ್ ತಂತ್ರಜ್ಞಾನ ಆಧಾರಿತ ಭೂಕಂಪ ಮುನ್ಸೂಚನಾ ವ್ಯವಸ್ಥೆಯು ಭೂಕಂಪದ ಪ್ರಾಥಮಿಕ ಕಂಪನವನ್ನು ಆಧರಿಸಿ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಲಿದೆ. ಇದನ್ನು ಆಧರಿಸಿ ನಿಯಂತ್ರಣ ವ್ಯವಸ್ಥೆಯು ಈ ಮಾರ್ಗದ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುತ್ತದೆ. ಇದನ್ನು ಅರಿತು ತುರ್ತು ಬ್ರೇಕ್ ವ್ಯವಸ್ಥೆ ಜಾಗೃತಗೊಳ್ಳಲಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ಚಲಿಸುವ ರೈಲು ತಕ್ಷಣ ನಿಲ್ಲಲಿದೆ’ ಎಂದಿದೆ.
ಮುಂಬೈ ಮತ್ತು ಅಹಮದಾಬಾದ್ ನಡುವಿನ ಮಾರ್ಗದಲ್ಲಿ ಕಳೆದ 100 ವರ್ಷಗಳಲ್ಲಿ ರಿಕ್ಟರ್ ಮಾಪನದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿರುವ ಉದಾಹರಣೆಗಳಿವೆ ಎಂದು ಜಪಾನ್‌ನ ತಂತ್ರಜ್ಞರು ಅಂದಾಜಿಸಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿ ಮೈಕ್ರೊ ಟರ್ಮರ್ ಟೆಸ್ಟ್ ಮೂಲಕ ಮಣ್ಣಿನ ವಿವರವಾದ ಪರೀಕ್ಷೆ ನಡೆಸಲಾಗಿದೆ ಎಂದು NHSRCL ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.