ಮುಂಬೈ: ರಾಜ್ಯದ ಭಿನ್ನಮತೀಯ ಶಾಸಕರು ತಂಗಿರುವ ಮುಂಬೈನ ಸೊಫಿಟೆಲ್ ಹೋಟೆಲ್ ಬಳಿ ಮಹಾರಾಷ್ಟ್ರ ಬಿಜೆಪಿಯ ಉಪಾಧ್ಯಕ್ಷ, ವಿಧಾನಪರಿಷತ್ ಸದಸ್ಯ ಪ್ರಸಾದ್ ಲಾಡ್ ಅವರು ಕಾಣಿಸಿಕೊಂಡು ಅನುಮಾನ ಮೂಡಿಸಿದ್ದಾರೆ. ಆದರೆ, ಪಕ್ಷದ ಕೆಲಸವೊಂದರ ಕಾರಣಕ್ಕೆ ತಾವು ಹೋಟೆಲ್ ಬಳಿ ಬಂದ್ದಾಗಿ ಲಾಡ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಹೋಟೆಲ್‌ನಿಂದ ಹೊರಬರುತ್ತಿದ್ದ ಅವರನ್ನು ಮಾಧ್ಯಮಗಳು ಮಾತಿಗೆಳೆದವು. ಈ ವೇಳೆ ಮಾತನಾಡಿದ ಅವರು, ’ಕರ್ನಾಟಕದಲ್ಲಿ ಎದುರಾಗಿರುವ ರಾಜಕೀಯ ಸನ್ನಿವೇಶದ ಬಗ್ಗೆ ಮಾಧ್ಯಮಗಳ ವರದಿಗಳನ್ನು ಕೇಳಿ ಬಲ್ಲೆ. ಆದರೆ, ನಾನು ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ನಿರತನಾಗಿದ್ದೇನೆ. ಶಾಸಕರಿಗೂ ನನಗೂ ಸಂಬಂಧವಿಲ್ಲ,‘ ಎಂದು ಹೇಳಿದರು.
ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಮತ್ತು ಹೈಕಮಾಂಡ್ ನಾಯಕರು ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ, ಈಗ ಭಿನ್ನಮತೀಯರು ತಂಗಿರುವ ಹೋಟೆಲ್ ಬಳಿ ಬಿಜೆಪಿಯ ಹಿರಿಯ ನಾಯಕ ಕಾಣಿಸಿಕೊಂಡು ಅನುಮಾನ ಮೂಡಿಸಿದ್ದಾರೆ. ಇನ್ನೊಂದೆಡೆ, ರಾಜೀನಾಮೆ ಬಳಿಕ ಶಾಸಕರು ರಾಜಭವನದಿಂದ ವಿಮಾನ ನಿಲ್ದಾಣಕ್ಕೆ ಮಿನಿ ಬಸ್‌ನಲ್ಲಿ ತೆರಳುವಾಗ ಅಲ್ಲಿ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿ ಸಂತೋಷ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವಿಡಿಯೋ ಈಗಾಗಲೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.