ADVERTISEMENT

ಬಿಎಂಡಬ್ಲ್ಯು ಕಾರು ಅಪಘಾತ: ಪ್ರಮುಖ ಆರೋಪಿ ಮಿಹಿರ್ ಬಂಧನ

ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಸಲ್ಲಿಕೆ

ಪಿಟಿಐ
Published 9 ಜುಲೈ 2024, 23:30 IST
Last Updated 9 ಜುಲೈ 2024, 23:30 IST
<div class="paragraphs"><p>ಸಂಗ್ರಹ ಚಿತ್ರ&nbsp;</p></div>

ಸಂಗ್ರಹ ಚಿತ್ರ 

   

ಮುಂಬೈ: ಬಿಎಂಡಬ್ಲ್ಯು ಕಾರು ಅಪಘಾತಕ್ಕೀಡಾದ ನಂತರ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ, ಶಿವಸೇನಾ (ಶಿಂದೆ ಬಣ) ಮುಖಂಡನ ಪುತ್ರ ಮಿಹಿರ್‌ ಶಾನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ವರ್ಲಿಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ್ದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಪತಿ ಗಾಯಗೊಂಡಿದ್ದರು. ಘಟನೆ ನಡೆದ ಎರಡು ದಿನಗಳ ನಂತರ ಪ್ರಮುಖ ಆರೋಪಿಯನ್ನು ವಿರಾರ್‌ನಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯ ಬಂಧನಕ್ಕಾಗಿ 11 ತಂಡಗಳನ್ನು ರಚಿಸಿದ್ದ ಪೊಲೀಸರು, ಲುಕ್‌ಔಟ್‌ ನೋಟಿಸ್‌ ಹೊರಡಿಸಿದ್ದರು.

ADVERTISEMENT

ಕಾರು ಅಪಘಾತ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ಚುರುಕುಗೊಳಿಸಿದ್ದು, ಮಿಹಿರ್‌ನ ತಾಯಿ ಹಾಗೂ ಇಬ್ಬರು ಸಹೋದರಿಯನ್ನು ಹೆಚ್ಚಿನ ವಿಚಾರಣೆಗಾಗಿ ಠಾಣೆ ಜಿಲ್ಲೆಯ ಶಹಾಪುರದಿಂದ ಮುಂಬೈಗೆ ಕರೆತಂದಿದ್ದಾರೆ. ಇವರೊಟ್ಟಿಗೆ ಇತರ 10 ಜನರನ್ನು ತನಿಖೆಗೊಳಪಡಿಸಿದ್ದಾರೆ. ಅಪಘಾತದ ನಂತರ ಪುತ್ರನನ್ನು ರಕ್ಷಿಸಲು ಆರೋಪಿಯ ತಂದೆ, ಶಿವಸೇನಾ ಮುಖಂಡ ರಾಜೇಶ್‌ ಶಾ ಯೋಜಿಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಾರ್‌ಗೆ ಬೀಗ: 

ತನ್ನ ಸ್ನೇಹಿತರೊಂದಿಗೆ ಶನಿವಾರ ರಾತ್ರಿ ಮಿಹಿರ್ ಭೇಟಿ ನೀಡಿದ್ದ ಮುಂಬೈನ ಜುಹು ಪ್ರದೇಶದಲ್ಲಿನ ಬಾರ್‌ಗೆ ಅಬಕಾರಿ ಇಲಾಖೆಯು ಬೀಗ ಹಾಕಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ 25 ವರ್ಷ ಪೂರ್ಣಗೊಂಡವರು ಮಾತ್ರ ಮದ್ಯ ಸೇವಿಸಬಹುದು ಎಂಬ ಕಾನೂನಿದೆ. ಮಿಹಿರ್‌ಗೆ 24 ವರ್ಷ ತುಂಬದಿದ್ದರೂ ಬಾರ್‌ನಲ್ಲಿ ಮದ್ಯ ನೀಡಲಾಗಿದೆ. ನಿಯಮ ಉಲ್ಲಂಘಿಸಿರುವುದರಿಂದ ಜಿಲ್ಲಾಧಿಕಾರಿ ಆದೇಶದಂತೆ ಬಾರ್‌ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಸ್ಟಡಿ ಅವಧಿ ವಿಸ್ತರಣೆ:

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಕಾರು ಚಾಲಕ ರಾಜಋಷಿ ಬಿದಾವತ್‌ನ ಪೊಲೀಸ್ ಕಸ್ಟಡಿ ಅವಧಿಯನ್ನು, ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ಎಸ್‌.ಪಿ. ಭೋಸಲೆ ಅವರು ಜುಲೈ 11ರವರೆಗೂ ವಿಸ್ತರಿಸಿ ಮಂಗಳವಾರ ಆದೇಶಿಸಿದರು.

ಅಪಘಾತ ಸಂಭವಿಸಿದಾಗ ಬಿದಾವತ್‌, ಮಿಹಿರ್‌ ಜೊತೆ ಬಿಎಂಡಬ್ಲ್ಯು ಕಾರಿನಲ್ಲಿದ್ದರು. ರಾಜೇಶ್‌ ಶಾಗೆ ಜಾಮೀನು ದೊರೆತಿದೆ.

‘ಬಾನೆಟ್‌ ಮೇಲೆ ಬಿದ್ದಿದ್ದ ಮಹಿಳೆ’ ‘ದ್ವಿಚಕ್ರ ವಾಹನಕ್ಕೆ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದಾಗ ಕಾವೇರಿ ನಖವಾ ಬಾನೆಟ್‌ ಮೇಲೆ ಬಿದ್ದಿದ್ದಾರೆ. ಸುಮಾರು 1.5 ಕಿ.ಮೀ. ದೂರ ಹಾಗೆಯೇ ಚಲಿಸಿದೆ. ವರ್ಲಿಯಲ್ಲಿ ಕಾರನ್ನು ನಿಲ್ಲಿಸಿದಾಗ ಆಕೆ ಕೆಳಗುರುಳಿ ಮುಂಭಾಗದ ಚಕ್ರಕ್ಕೆ ಸಿಲುಕಿದ್ದಾರೆ. ಆರೋಪಿಗಳಾದ ಮಿಹಿರ್ ಮತ್ತು ಬಿದಾವತ್ ತಕ್ಷಣವೇ ನಖವಾ ದೇಹವನ್ನು ಚಕ್ರದಿಂದ ಬೇರ್ಪಡಿಸಿ ರಸ್ತೆ ಪಕ್ಕಕ್ಕೆ ಎಳೆದಿದ್ದಾರೆ.’ ‘ಈ ಘಟನೆ ನಂತರ ಇಬ್ಬರೂ ತಮ್ಮ ಆಸನಗಳನ್ನು ಬದಲಾಯಿಸಿಕೊಂಡಿದ್ದಾರೆ. ಸ್ಥಳದಿಂದ ಪರಾರಿಯಾಗಲು ಕಾರನ್ನು ಹಿಮ್ಮುಖವಾಗಿ ಚಲಿಸಿದ್ದಾರೆ. ಆ ಸಂದರ್ಭವೂ ಕಾರು ಕಾವೇರಿ ಮೇಲೆ ಹರಿದಿದೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ದೃಶ್ಯಾವಳಿಗಳಿರುವ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.