ಮುಂಬೈ:ಕುರ್ಲಾ ಪ್ರದೇಶದಲ್ಲಿನ ನಾಲ್ಕು ಮಹಡಿಯ ಜನವಸತಿ ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ಕೆಲ ಫ್ಲ್ಯಾಟ್‌ಗಳ ಮಾಲೀಕರು ಮತ್ತು ಇತರರ ವಿರುದ್ಧ ಉದ್ದೇಶ ಪೂರ್ವಕವಲ್ಲದ ಕೊಲೆ ಪ್ರಕರಣವನ್ನು ಮುಂಬೈ ಪೊಲೀಸರು ಬುಧವಾರ ದಾಖಲಿಸಿದ್ದಾರೆ.
ನಾಯ್ಕ್ ನಗರ ಗೃಹ ಸಹಕಾರ ಸೊಸೈಟಿಯಲ್ಲಿರುವ ಕಟ್ಟಡ ಸೋಮವಾರ ಮಧ್ಯರಾತ್ರಿ ಕುಸಿದಿತ್ತು. ಈ ದುರಂತದಲ್ಲಿ 19 ಜನರು ಮೃತಪಟ್ಟು 15 ಮಂದಿ ಗಾಯಗೊಂಡಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಈ ಕಟ್ಟಡವು ವಾಸಯೋಗ್ಯವಲ್ಲ ಎಂದು ಮಹಾನಗರ ಪಾಲಿಕೆ (ಬಿಎಂಸಿ) ಘೋಷಿಸಿದ ಬಳಿಕವೂ, ಕೆಲ ಫ್ಲ್ಯಾಟ್‌ಗಳ ಮಾಲೀಕರು ತಮ್ಮ ಮನೆಗಳನ್ನು ಬಾಡಿಗೆಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಫ್ಲ್ಯಾಟ್‌ಗಳ ಮಾಲೀಕರಾದ ರಜನಿ ರಾಥೋಡ್, ಕಿಶೋರ್ ಚವಾಣ್, ಬಾಲಕೃಷ್ಣ ರಾಥೋಡ್ ಮತ್ತು ದಿಲಿಪ್ ವಿಶ್ವಾಸ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಮಾಲೀಕರ ವಿರುದ್ಧ ಐಪಿಸಿ ಕಲಂ 304 (2), 308, 337, 34ರ ಅಡಿಯಲ್ಲಿ ನೆಹರೂನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಕಟ್ಟಡ ಕುಸಿತ: ಒಬ್ಬರ ಸಾವು
ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಲ್ಯಾಣ ನಗರದ ರಾಂಬಾಗ್‌ನಲ್ಲಿ ಮೂರು ಮಹಡಿಯ ಕಟ್ಟಡ ಬುಧವಾರ ಬೆಳಿಗ್ಗೆ ಕುಸಿದಿದೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.
ಮೃತರನ್ನು ಸೂರ್ಯಕಾಂತ್ ಕಾಕಡ್ (52) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಅವರ ಪತ್ನಿಯನ್ನು (50) ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡ6.15ರ ಸಂದರ್ಭದಲ್ಲಿ ಕುಸಿದಿದೆ. ಇಡೀ ಕಟ್ಟಡದಲ್ಲಿ ಈ ದಂಪತಿ ಮಾತ್ರ ವಾಸಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕಟ್ಟಡವು ವಾಸಯೋಗ್ಯವಾಗಿತ್ತೋ ಅಥವಾ ಇಲ್ಲವೋ ಎಂಬುದರ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.