ಮುಂಬೈ: ಮಲಾಡ್‌ನಲ್ಲಿ (ಪಶ್ಚಿಮ) ಅದಾನಿ ಎಲೆಕ್ಟ್ರಿಸಿಟಿ ಕಂಪನಿಯು ಚರಂಡಿಯೊಂದರ ಮೇಲೆ ತಾತ್ಕಾಲಿಕವಾಗಿ ಅಳವಡಿಸಿದ್ದ 90 ಅಡಿ ಉದ್ದದ, 6 ಟನ್ ತೂಕದ ಕಬ್ಬಿಣದ ಸೇತುವೆಯನ್ನು ಕದ್ದೊಯ್ದಿದ್ದ ಕಳ್ಳರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಬಂಗೂರ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಶನಿವಾರ ತಿಳಿಸಿದ್ದಾರೆ.
ಚರಂಡಿಗೆ ಶಾಶ್ವತ ಸೇತುವೆ ನಿರ್ಮಿಸಿದ ಬಳಿಕ ತಾತ್ಕಾಲಿಕವಾಗಿ ಅಳವಡಿಸಿದ್ದ ಕಬ್ಬಿಣದ ಸೇತುವೆಯನ್ನು ಕೆಲ ತಿಂಗಳ ಹಿಂದಷ್ಟೇ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಇದು ಕಳವಾಗಿದೆ ಎಂದು ಪವರ್ ಕಂಪನಿ ಜೂನ್ 26ರಂದು ದೂರು ದಾಖಲಿಸಿತ್ತು.
‘ಜೂನ್ 6ರಿಂದ ಸೇತುವೆ ನಾಪತ್ತೆಯಾಗಿರುವುದು ತನಿಖೆಯಿಂದ ಖಚಿತಪಟ್ಟಿತು. ಸುತ್ತಮುತ್ತಲಿನ ಸ್ಥಳದಲ್ಲಿದ್ದ ಸಿ.ಸಿ ಟಿವಿ ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದಾಗ, 11ರಂದು ಬೃಹತ್ ವಾಹನವೊಂದು ಚಲಿಸಿರುವುದು ಪತ್ತೆಯಾಯಿತು. ಈ ವಾಹನದ ನೋಂದಣಿ ಸಂಖ್ಯೆ ಪತ್ತೆ ಹಚ್ಚಿ, ವಿಚಾರಣೆ ನಡೆಸಿದಾಗ, ಗ್ಯಾಸ್ ಕಟರ್ ಬಳಸಿ ಕಳವು ಮಾಡಿರುವುದು ಗೊತ್ತಾಗಿದೆ‘ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿದ್ದ ಕಂಪನಿಯ ಉದ್ಯೋಗಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಈತನು ಸೇರಿದಂತೆ ನಾಲ್ವರನ್ನು ಬಂಧಿಸಿ, ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.