ADVERTISEMENT

ಮುಂಬೈನಲ್ಲಿ ಅನಧಿಕೃತ ಬೃಹತ್ ಜಾಹೀರಾತು ಫಲಕ ಕುಸಿತ: ಮೃತರ ಸಂಖ್ಯೆ 14ಕ್ಕೆ ಏರಿಕೆ

ಅನಧಿಕೃತ ಬೃಹತ್ ಜಾಹೀರಾತು ಫಲಕವೊಂದು ಪೆಟ್ರೋಲ್‌ ಪಂಪ್‌ ಮೇಲೆ ಬಿದ್ದು ಸಂಭವಿಸಿದ ಅವಘಡದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಪಿಟಿಐ
Published 14 ಮೇ 2024, 2:07 IST
Last Updated 14 ಮೇ 2024, 2:07 IST
<div class="paragraphs"><p>ಮುಂಬೈನಲ್ಲಿ&nbsp;ಘಾಟ್‌ಕೋಪರ್‌ ಪ್ರದೇಶದ ಅನಧಿಕೃತ ಬೃಹತ್ ಜಾಹೀರಾತು ಫಲಕ ಕುಸಿತ</p></div>

ಮುಂಬೈನಲ್ಲಿ ಘಾಟ್‌ಕೋಪರ್‌ ಪ್ರದೇಶದ ಅನಧಿಕೃತ ಬೃಹತ್ ಜಾಹೀರಾತು ಫಲಕ ಕುಸಿತ

   

ಮುಂಬೈ: ಸೋಮವಾರ ವಾಣಿಜ್ಯ ನಗರಿ ಮುಂಬೈನಲ್ಲಿ ಅನಧಿಕೃತ ಬೃಹತ್ ಜಾಹೀರಾತು ಫಲಕವೊಂದು ಪೆಟ್ರೋಲ್‌ ಪಂಪ್‌ ಮೇಲೆ ಬಿದ್ದು ಸಂಭವಿಸಿದ ಅವಘಡದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 74 ಜನ ಗಾಯಗೊಂಡಿದ್ದಾರೆ.

ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಈ ವಿಷಯ ಖಚಿತಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳುಗಳಲ್ಲಿ 35 ಜನ ಬಿಡುಗಡೆಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಪರಿಹಾರ ಕಾರ್ಯಾಚರಣೆ ಮಂಗಳವಾರ ಬೆಳಿಗ್ಗೆಯೂ ಮುಂದುವರೆದಿತ್ತು ಎಂದು ತಿಳಿಸಿದ್ದಾರೆ.

ADVERTISEMENT

ಮಧ್ಯಾಹ್ನ ಇದ್ದಕ್ಕಿದ್ದಂತೆ ದೂಳು ಸಹಿತ ಭಾರಿ ಬಿರುಗಾಳಿ ಬೀಸಿತು. ಈ ವೇಳೆ ಘಾಟ್‌ಕೋಪರ್‌ ಪ್ರದೇಶದ ಚೆಡ್ಡಾನಗರದಲ್ಲಿ 100 ಅಡಿ ಎತ್ತರದ ಜಾಹೀರಾತು ಫಲಕವು ಪೆಟ್ರೋಲ್‌ ಪಂಪ್‌ ಮೇಲೆ ಬಿದ್ದಿತ್ತು.

ಮುಂಬೈ: ಭಾರಿ ಬಿರುಗಾಳಿ ಸಹಿತ ಮಳೆಗೆ ಮುಂಬೈನ ಚೆಡ್ಡಾನಗರದಲ್ಲಿ ಪೆಟ್ರೋಲ್‌ ಪಂಪ್‌ ಮೇಲೆ ಬಿದ್ದ ಬೃಹತ್‌ ಜಾಹೀರಾತು ಫಲಕದ ಕೆಳಗೆ ಸಿಲುಕಿ ಸಾವಿಗೀಡಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 75 ಜನರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 

ಈವರೆಗೆ ಫಲಕದ ಅಡಿ ಸಿಲುಕಿದ್ದ ಒಟ್ಟು 89 ಜನರನ್ನು ಹೊರತೆಗೆಯಲಾಗಿದ್ದು, ಈ ಪೈಕಿ 14 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಹೋರ್ಡಿಂಗ್‌ ಅಡಿ ಇನ್ನೂ ಎಷ್ಟು ಜನರು ಸಿಲುಕಿದ್ದಾರೆ ಎಂಬುದು ತಿಳಿದುಬಂದಿಲ್ಲ. 

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಒಬ್ಬ ಗಾಯಾಳುವಿನ ಸ್ಥಿತಿ ಗಂಭೀರವಾಗಿದೆ. ಒಟ್ಟು 32 ಜನರು ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಸೋಮವಾರ ಮುಂಬೈಯಲ್ಲಿ ದೂಳು ಸಹಿತ ಬಿರುಗಾಳಿ ಮತ್ತು ಮಳೆ ಸುರಿಯುತ್ತಿದ್ದ ವೇಳೆ ಘಾಟ್‌ಕೋಪರ್‌ನಲ್ಲಿ ಅಕ್ರಮವಾಗಿ ಇರಿಸಲಾಗಿದ್ದ 120 ಚದರ ಅಡಿ ಎತ್ತರ ಮತ್ತು 120 ಅಡಿ ಅಗಲವಿದ್ದ ಜಾಹೀರಾತು ಫಲಕವು ಪೆಟ್ರೋಲ್‌ ಪಂಪ್‌ ಮೇಲೆ ಬಿದ್ದಿದೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಂಬೈ ಪೊಲೀಸ್‌ ಕಮಿಷನರ್‌ ವಿವೇಕ್‌ ಫನ್ಸಾಲ್ಕರ್‌ ತಿಳಿಸಿದ್ದಾರೆ. 

ಘಟನೆ ನಡೆದ ಸ್ಥಳದಲ್ಲಿ 12 ಅಗ್ನಿಶಾಮಕ ವಾಹನಗಳು,ಇತರ ರಕ್ಷಣಾ ಸಿಬ್ಬಂದಿ ಮತ್ತು 100 ಸಿಬ್ಬಂದಿಯೊಳಗೊಂಡ 2 ಎನ್‌ಡಿಆರ್‌ಎಫ್‌ ಪಡೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಇದರೊಂದಿಗೆ 2 ಹೆವಿ ಡ್ಯೂಟಿ ಕ್ರೇನ್‌, 2 ಹೈಡ್ರಾ ಕ್ರೇನ್‌, 2 ಮಣ್ಣು ಅಗೆಯುವ ಯಂತ್ರ ಮತ್ತು 25 ಆ್ಯಂಬುಲೆನ್ಸ್‌ಗಳನ್ನು ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ. 

ಬೃಹತ್‌ ಮತ್ತು ಭಾರವಾದ ಫಲಕವನ್ನು ಎತ್ತಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಹರಸಾಹಸವಾಗಿತ್ತು. ಹೀಗಿರುವಾಗ ತಲಾ 500 ಟನ್‌ ತೂಕದ ಎರಡು ಕ್ರೇನ್‌ಗಳು ಎರಡೂ ಬದಿಯಿಂದ ಹೋರ್ಡಿಂಗ್‌ ಅನ್ನು 3.5 ರಿಂದ 4 ಅಡಿ ಎತ್ತರ ಎತ್ತಿದ ಬಳಿಕ ರಕ್ಷಣಾ ಸಿಬ್ಬಂದಿ ಬಾಗಿಕೊಂಡು ಹೋಗಿ ಹೋರ್ಡಿಂಗ್‌ ಕೆಳಗೆ ಸಿಲುಕಿದ ಜನರನ್ನು ರಕ್ಷಿಸಿದ್ದಾರೆ. 

ಪಂತ್‌ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಘಟನೆಗೆ ಸಂಬಂಧಿಸಿದಂತೆ ಇಗೊ ಮಿಡಿಯಾ ಪ್ರೈವೆಟ್‌ ಲಿಮಿಟೆಡ್‌ ಮಾಲೀಕ ಭವೇಶ್‌ ಭಿಂಡೆ ಮತ್ತು ಇತರರ ವಿರುದ್ಧ ಪಂತ್‌ ನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಸೇರಿದಂತೆ ಇತರ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಜಾಹೀರಾತು ಫಲಕವು ಅಕ್ರಮವಾಗಿದ್ದು ಅದನ್ನು ಅಳವಡಿಸಲು ಯಾವುದೇ ಅಧಿಕೃತ ಅನುಮತಿ ಪಡೆದಿಲ್ಲ. ನಿರಾಕ್ಷೇಪಣಾ ಪ‍ತ್ರವನ್ನೂ ಪಡೆದಿಲ್ಲ ಎಂದಿದ್ದಾರೆ. ಜಾಹೀರಾತು ಫಲಕ ಅಳವಡಿಕೆಗೆ ಅನುಮತಿ ನೀಡುವ ಅಧಿಕಾರ ಪಾಲಿಕೆಗಿರುವಾಗ ಪೊಲೀಸ್‌ ಅಧಿಕಾರಿ ಹೇಗೆ ಇದಕ್ಕೆ ಅನುಮತಿ ನೀಡಿದ್ದಾರೆ. 40 ಅಡಿ ಫಲಕಕ್ಕೆ ಕಾಗದಗಳ ಮೇಲೆ ಅನುಮತಿ ನೀಡಲಾಗಿದೆ. ಆದರೆ ಕುಸಿದು ಬಿದ್ದಿರುವ ಫಲಕ 120 ಅಡಿ ಎತ್ತರವಾಗಿದೆ. ಮುಂಬೈನ ವಿವಿಧೆಡೆ ಇಂಥದ್ದೇ 400 ಫಲಕಗಳಿರಬಹುದು ಎಂದು ಬಿಜೆಪಿ ಮುಖಂಡ ಕಿರೀಟ್‌ ಸೋಮಯ್ಯ ಅವರು ಕಿಡಿಕಾರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.