ಮುಂಬೈ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಟಾರ್ಚ್ ಲೈಟ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ ಮಾಡುವಾಗ ಗರ್ಭಿಣಿ ಹಾಗೂ ಆಕೆಯ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿರುವ ಅಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈ ಮಹಾನಗರ ಪಾಲಿಕೆಯ ಸುಸ್ಮಾ ಸ್ವರಾಜ್ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ ಈ ಘಟನೆ ನಡೆದಿದೆ.
ಹೆರಿಗೆಗೆ ದಾಖಲಾಗಿದ್ದ ಕೌಸರುದ್ದೀನ್ ಅನ್ಸಾರಿ ಅವರ ಪತ್ನಿ ಸಾಹಿದುನ್ ಅವರೇ ಮೃತರಾದವರು.
ಸಾಹಿದುನ್ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ ವೈದ್ಯರು ಸಾಮಾನ್ಯ ಹೆರಿಗೆ ಮಾಡಿಸುವುದಾಗಿ ಹೇಳಿದ್ದರು. ಆದರೆ ಗುರುವಾರ ಸಂಜೆವರೆಗೂ ಕಾದು ಸಿಸರಿಯನ್ ಹೆರಿಗೆ ಮಾಡಿಸಲು ಮುಂದಾಗಿದ್ದರು. ಆದರೆ ಈ ವೇಳೆ ವಿದ್ಯುತ್ ಕೈಕೊಟ್ಟಿತ್ತು. ಟಾರ್ಚ್ ಲೈಟ್ ಬೆಳಕಲ್ಲಿಯೇ ಸಿಸೇರಿಯನ್ ಮಾಡುತ್ತಿದ್ದರು. ಇದರಿಂದ ನನ್ನ ಪತ್ನಿ ಮಗು ಮೃತಪಟ್ಟಿದೆ ಎಂದು ಅನ್ಸಾರಿ ಆರೋಪಿಸಿದ್ದಾರೆ.
ಘಟನೆ ಸಂಬಂಧ ತಡರಾತ್ರಿ ಅನ್ಸಾರಿ ಸಂಬಂಧಿಕರು ಮುಂಬೈ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಕೌಸರುದ್ದೀನ್ ಅಂಗವಿಕಲರಾಗಿದ್ದಾರೆ. ಕಳೆದ 11 ತಿಂಗಳ ಹಿಂದೆ ಅವರ ವಿವಾಹವಾಗಿತ್ತು. ಈ ಕುರಿತು ಎನ್.ಡಿ.ಟಿ.ವಿ ವೆಬ್ ಸೈಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.