ರಾಂಚಿ: ಜಾರ್ಖಂಡ್‌ನ ಸರಾಯ್‌ಕೆಲಾ–ಖರ್ಸಾವಾನ್ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಹೌರಾ–ಮುಂಬೈ ರೈಲಿನ ಕನಿಷ್ಠ 18 ಬೋಗಿಗಳು ಹಳಿ ತಪ್ಪಿದ ಪರಿಣಾಮ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ.
ಆಗ್ನೇಯ ರೈಲ್ವೆಯ ಚಕ್ರಧರಪುರ ವಿಭಾಗದ ಜಮ್‌ಶೆಡ್‌ಪುರದಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬಡಾಬಂಬೊ ಬಳಿ ಮುಂಜಾನೆ 3.45ರ ಸುಮಾರಿಗೆ ಅವಘಡ ಸಂಭವಿಸಿದೆ.
‘ಅವಘಡ ಸಂಭವಿಸಿರುವ ಸ್ಥಳದ ಸಮೀಪವೇ ಮತ್ತೊಂದು ಗೂಡ್ಸ್ ರೈಲು ಹಳಿ ತಪ್ಪಿದೆ. ಆದರೆ, ಎರಡು ಅಪಘಾತಗಳು ಏಕಕಾಲದಲ್ಲಿ ಸಂಭವಿಸಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ’ ಎಂದು ಆಗ್ನೇಯ ರೈಲ್ವೆ ವಕ್ತಾರ ಓಂ ಪ್ರಕಾಶ್ ಚರಣ್ ಹೇಳಿದ್ದಾರೆ.
‘ರೈಲಿನ 22 ಕೋಚ್‌ಗಳ ಪೈಕಿ 18 ಕೋಚ್‌ಗಳು ಹಳಿತಪ್ಪಿವೆ. ಈ ಪೈಕಿ 16 ಪ್ರಯಾಣಿಕ ಕೋಚ್‌ಗಳು, ಒಂದು ಪವರ್ ಕಾರ್ ಮತ್ತೊಂದು ಪ್ಯಾಂಟ್ರಿ ಕಾರ್’ ಎಂದು ವಕ್ತಾರರು ತಿಳಿಸಿದ್ದಾರೆ.
‘ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ಅವಘಡದ ಬಗ್ಗೆ ತನಿಖೆ ನಡೆಯಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹10 ಲಕ್ಷ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ತಲಾ ₹5 ಲಕ್ಷ ಹಾಗೂ ಅಲ್ಪ ಪ್ರಮಾಣದಲ್ಲಿ ಗಾಯಗೊಂಡವರಿಗೆ ತಲಾ ₹1 ಲಕ್ಷ ಪರಿಹಾರವನ್ನು ರೈಲ್ವೆಯು ಘೋಷಿಸಿದೆ’ ಎಂದು ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರೊಬ್ಬರು (ಡಿಸಿಎಂ) ತಿಳಿಸಿದರು.
ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಮತ್ತು ಗಾಯಾಳುಗಳಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ನಿರ್ದೇಶನ ನೀಡಿದ್ದಾರೆ.
ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾರ, ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿದೆ. ಶೇ 80ರಷ್ಟು ಪ್ರಯಾಣಿಕರನ್ನು ಚಕ್ರಧರಪುರ ರೈಲು ನಿಲ್ದಾಣಕ್ಕೆ ಕಳುಹಿಸಲಾಗಿದೆ. ಉಳಿದ 20ರಷ್ಟು ಪ್ರಯಾಣಿಕರನ್ನು ವಿಶೇಷ ರೈಲಿನ ಮೂಲಕ ಕಳುಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.