ಮುಂಬೈ: ದಕ್ಷಿಣ ಮುಂಬೈನ ವಿವಿಧೆಡೆ ಸ್ಫೋಟಿಸುವ ಉದ್ದೇಶದಿಂದ ಬಂದರಿನಲ್ಲಿ ಸ್ಫೋಟಕಗಳನ್ನು ತಂದಿಡಲಾಗಿದೆ. ಅದರೊಂದಿಗೆ 90 ಕೆ.ಜಿ ಮೆಫೆಡ್ರೋನ್ ಮಾದಕವಸ್ತುವನ್ನೂ ಸಾಗಿಸಲಾಗಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಹುಸಿ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
‘ಆರೋಪಿಯು ಶುಕ್ರವಾರ ದಕ್ಷಿಣದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಮಾದಕ ವಸ್ತು ಮತ್ತು ಸ್ಫೋಟಕಗಳು ಗುರುವಾರವೇ ಬಂದರಿಗೆ ತಲುಪಿವೆ ಎಂದು ಹೇಳಿದ್ದ. ಕೂಡಲೇ ಬಂದರಿನ ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ಆದರೆ ಅಲ್ಲಿ ಅಂಥ ಯಾವುದೇ ವಸ್ತುಗಳು ಪತ್ತೆಯಾಗಿರಲಿಲ್ಲ. ಬಳಿಕ ಕರೆ ಮಾಡಿದ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಪಾಲ್ಘಾರ್ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ತಿಳಿಸಿದ್ದಾರೆ.
ಸದ್ಯ ಆರೋಪಿ ತಪ್ಪೊಪ್ಪಿಕೊಂಡಿದ್ದು, ಸುಳ್ಳು ಮಾಹಿತಿ ಹಂಚಿಕೆ, ಬೆದರಿಕೆ ಮತ್ತಿತರ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506(3), 182, 505(1), 179ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.