ಮುಂಬೈ: ದುಬಾರಿ ಬೆಲೆಯ ಮೊಬೈಲ್ ಬುಕ್ ಮಾಡಿದ್ದೆ. ಆದರೆ, ಅರ್ಧ ಡಜನ್ ಟೀ ಲೋಟಗಳನ್ನು ಕಳುಹಿಸಿಕೊಡಲಾಗಿದೆ ಎಂದು ಆರೋಪಿಸಿ ಮುಂಬೈನ ವ್ಯಕ್ತಿಯೊಬ್ಬರು ಇ–ಕಾಮರ್ಸ್ ವಲಯದ ದೈತ್ಯ ಕಂಪನಿ 'ಅಮೆಜಾನ್' ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೃಹತ್ ಮುಂಬೈ ವಿದ್ಯುತ್ ಸರಬರಾಜು ನಿಗಮದಲ್ಲಿ ಎಂಜಿನಿಯರ್ ಆಗಿರುವ ಅಮರ್ ಚೌಹಾಣ್ ಅವರೇ ದೂರು ನೀಡಿರುವ ವ್ಯಕ್ತಿ.
₹54,999 ಬೆಲೆಯ ಟೆಕ್ನೊ ಫ್ಯಾಂಥಮ್ ವಿ ಫೋಲ್ಡ್ ಮೊಬೈಲ್ ಅನ್ನು ಜುಲೈ 13ರಂದು ಆರ್ಡರ್ ಮಾಡಿದ್ದೆ. ಎರಡು ದಿನಗಳ ನಂತರ ಪಾರ್ಸೆಲ್ ಬಂತು. ತೆರೆದು ನೋಡಿದಾಗ 6 ಟೀ ಲೋಟಗಳಿರುವುದನ್ನು ಕಂಡು ಆಘಾತವಾಯಿತು ಎಂದು ಆರೋಪಿಸಿದ್ದಾರೆ.
ಈ ವಿಚಾರವಾಗಿ ಅಮೆಜಾನ್ ಅವರನ್ನೂ ಸಂಪರ್ಕಿಸಿದೆ. ಆದರೆ, ಅವರಿಂದ ಸಮಾಧಾನಕರ ಉತ್ತರವೇನೂ ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ವಂಚನೆ ಆರೋಪದಲ್ಲಿ ಅಮೆಜಾನ್ ವಿರುದ್ಧ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಮಹಿಮ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆಜಾನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.