ಮುಂಬೈ: ‘ಮುಂಬೈನಿಂದ ದೆಹಲಿಗೆ ತೆರಳಲು ಸಿದ್ಧವಾಗಿದ್ದ ವಿಸ್ತಾರ ವಿಮಾನದಲ್ಲಿ ಟೇಕಾಫ್‌ಗೂ ಮುನ್ನ 23 ವರ್ಷದ ಪ್ರಯಾಣಿಕನೊಬ್ಬ ವಿಮಾನವನ್ನು ಅಪಹರಣ ಮಾಡುವ ಕುರಿತು ಮೊಬೈಲ್ ಫೋನ್‌ನಲ್ಲಿ ಮಾತನಾಡಿದ್ದು, ಆತನನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದರು.
‘ಹರಿಯಾಣ ಮೂಲದ ರಿತೇಶ್ ಜುನೇಜಾ ಎಂಬಾತ ಬಂಧಿತ ಪ್ರಯಾಣಿಕ. ಗುರುವಾರ ಸಂಜೆ 6.30ಕ್ಕೆ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಫೋನ್‌ನಲ್ಲಿ ಪ್ರಯಾಣಿಕ ಮಾತನಾಡಿದ್ದನ್ನು ಕೇಳಿಸಿಕೊಂಡ ವಿಮಾನ ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರು ಆತನನ್ನು ಭದ್ರತಾ ಸಿಬ್ಬಂದಿಯ ವಶಕ್ಕೊಪ್ಪಿಸಿದ್ದಾರೆ’ ಎಂದರು.
‘ಬಳಿಕ ವಿಮಾನವನ್ನು ಸಂಪೂರ್ಣ ಪರೀಕ್ಷಿಸಲಾಯಿತು. ಅಧಿಕಾರಿಗಳ ಒಪ್ಪಿಗೆ ದೊರೆತ ಮೇಲೆ ವಿಮಾನ ದೆಹಲಿಗೆ ತೆರಳಿತು’ ಎಂದೂ ಅವರು ಹೇಳಿದರು.
‘ಬಂಧಿತ ಪ್ರಯಾಣಿಕನು ಫೋನ್‌ನಲ್ಲಿ ಮಾತನಾಡುವ ವೇಳೆ– ಅಹಮದಾಬಾದ್‌ನ ವಿಮಾನ ಇನ್ನೇನು ಹೊರಡಲಿದೆ. ಏನಾದರೂ ಸಮಸ್ಯೆಗಳಿದ್ದರೆ ನನಗೆ ಕರೆ ಮಾಡಿ. ಅಪಹರಣದ ಎಲ್ಲ ಯೋಜನೆಯನ್ನೂ ಸಿದ್ಧಪಡಿಸಲಾಗಿದೆ. ಅದಕ್ಕೆ ಅವಕಾಶವೂ ಇದೆ. ಚಿಂತಿಸಬೇಡಿ– ಎಂದಿದ್ದಾನೆ. ಈ ಸಂಭಾಷಣೆ ಕೇಳಿಸಿಕೊಂಡ ವಿಮಾನದ ಒಬ್ಬ ಸಿಬ್ಬಂದಿ ಹಾಗೂ ಕೆಲವು ಪ್ರಯಾಣಿಕರು ಗಾಬರಿಯಾಗಿದ್ದಾರೆ. ಕೂಡಲೇ ಸಿಬ್ಬಂದಿಯು ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿ, ಆತನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಒಪ್ಪಿಸಿದ್ದಾರೆ’ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
‘27 ವರ್ಷದ ವಿಮಾನದ ಸಿಬ್ಬಂದಿ ದಾಖಲಿಸಿರುವ ದೂರಿನ ಆಧಾರದ ಮೇಲೆ ರಿತೇಶ್‌ನನ್ನು ಸಹರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪ್ರಸ್ತುತದಲ್ಲಿ, ಆರೋಪಿಯು ಮಾನಸಿಕ ರೋಗಿಯಾಗಿದ್ದು ಆತ 2021ರಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಮಾನವ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ದುಡುಕಿನ ಅಥವಾ ನಿರ್ಲಕ್ಷ್ಯದ ಕ್ರಿಯೆ) ಹಾಗೂ ಸೆಕ್ಷನ್ 505 (2) (ಜನರಲ್ಲಿ ಭಯ ಅಥವಾ ತಳಮಳ ಹುಟ್ಟಿಸುವ ಉದ್ದೇಶದಿಂದ ಹೇಳಿಕೆ ನೀಡುವ ಪ್ರಕ್ರಿಯೆ) ಪ್ರಕಾರ ಪ್ರಕರಣ ದಾಖಲಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.