ಮುಂಬೈ: ಮುಂಬೈ ಮೆಟ್ರೊ–3ನೇ ಹಂತದ ಕಾಮಗಾರಿಗಾಗಿ ಮರಗಳನ್ನು ನಾಶ ಮಾಡುವ ನಿರ್ಧಾರದ ವಿರುದ್ಧಆರೆ ಕಾಲೊನಿಯವರ ಪ್ರತಿಭಟನೆಗೆರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ್ದಾರೆ.
ಅದೇ ವೇಳೆ ಮರಗಳನ್ನು ಕಡಿಯುವುದು ಅನಿವಾರ್ಯ ಎಂದು ಮುಂಬೈ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕಿ ಅಶ್ವಿನಿ ಭಿಡೆ ಟ್ವೀಟಿಸಿದ್ದು, ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆರೆ ಪ್ರದೇಶದ ಮರಗಳನ್ನು ನಾಶ ಮಾಡುವುದನ್ನು ವಿರೋಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿAareyChipko SaveAarey ಮೊದಲಾದ ಹ್ಯಾಶ್‌ಟ್ಯಾಗ್ ಬಳಸಿ ಅಭಿಯಾನ ಮುಂದುವರಿದಿದೆ. ಭಾನುವಾರ ಆರೆ ವಿಷಯಕ್ಕೆ ಸಂಬಂಧಿಸಿ#AareyForestPolitics ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.
ಮೆಟ್ರೊ ಕಾಮಗಾರಿಗೆ ಶುಕ್ರವಾರ ರಾತ್ರಿಯಿಂದ ಸಾವಿರಾರು ಮರಗಳನ್ನು ಕಡಿಯಲಾಗಿದೆ. ಮೆಟ್ರೊ–3ನೇ ಹಂತದ ಕಾಮಗಾರಿಗೆ ಬಲಿಯಾಗಲಿರುವ 2,656 ಮರಗಳನ್ನು ರಕ್ಷಿಸಲು ಆರೆ ಕಾಲೊನಿ ನಿವಾಸಿಗರು ಪಣ ತೊಟ್ಟಿದ್ದು, ಶನಿವಾರ ಭಾರಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಪೊಲೀಸ್ ಸಿಬ್ಬಂದಿ ಮತ್ತು ರೈಲು ನಿಗಮದ ಅಧಿಕಾರಿಗಳಿಗೆ ಥಳಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಧಾರ ಮೇಲೆ 29 ಮಂದಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ನಿರ್ಮಾಣ ಕಾರ್ಯಗಳಿಗಾಗಿ ಕೆಲವೊಂದನ್ನು ನಾಶ ಮಾಡಬೇಕಾದುದು ಅನಿವಾರ್ಯ. ಇದು ಹೊಸ ಜೀವನ ಮತ್ತು ಹೊಸ ಸೃಷ್ಟಿಗೆ ನಾಂದಿಯಾಗುತ್ತದೆ ಎಂದು ಅಶ್ವಿನಿ ಭಿಡೆ ಟ್ವೀಟಿಸಿದ್ದಾರೆ.
ಮರಗಳನ್ನು ಕಡಿಯುವ ಕೆಲಸವನ್ನು ಸಮರ್ಥಿಸಿಕೊಂಡಿದ್ದಕ್ಕೆ ಭಿಡೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಧಿತರಾಗಿದ್ದ ಪ್ರತಿಭಟನಾಕಾರರಿಗೆ ಜಾಮೀನು
ಆರೆ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂಧಿತರಾಗಿದ್ದ 29 ಮಂದಿಗೆ ಬೋರಿವಲಿ ನ್ಯಾಯಾಲಯ ಜಾಮೀನು ನೀಡಿದೆ. 7,000 ಜಾಮೀನು ಬಾಂಡ್ ಸಲ್ಲಿಸಿದ ನಂತರ ಇವರನ್ನು ಬಿಡುಗಡೆ ಮಾಡಲಾಗುವುದು.
ಸರ್ಕಾರಿ ಅಧಿಕಾರಿಗಳ ಕಾರ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ್ದಆರೋಪದ ಮೇಲೆ ಐಪಿಸಿಯ ವಿವಿಧ ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ:ಆರೆ ಕಾಲೊನಿ: ಮರಗಳ ಹನನ, 29 ಮಂದಿ ಬಂಧನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.