ADVERTISEMENT

ಕಾಂಗ್ರೆಸ್‌ ತೆಕ್ಕೆಗೆ ಮರಳುವುದೇ ಭದ್ರಕೋಟೆ

ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪ್ರಿಯಾದತ್ – ಪೂನಂ ಮಹಾಜನ್ ಸೆಣಸಾಟ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 20:36 IST
Last Updated 27 ಏಪ್ರಿಲ್ 2019, 20:36 IST
ಪ್ರಚಾರದಲ್ಲಿ ಪ್ರಿಯಾ ದತ್‌ಗೆ ಸೋದರ ಸಂಜಯ್ ದತ್ ಹೆಗಲು ನೀಡುತ್ತಿದ್ದಾರೆ
ಪ್ರಚಾರದಲ್ಲಿ ಪ್ರಿಯಾ ದತ್‌ಗೆ ಸೋದರ ಸಂಜಯ್ ದತ್ ಹೆಗಲು ನೀಡುತ್ತಿದ್ದಾರೆ   

ಮುಂಬೈ: ಮುಂಬೈ ಉತ್ತರ ಕೇಂದ್ರ ಲೋಕಸಭಾ ಕ್ಷೇತ್ರವು ರಚನೆಯಾದ ನಂತರ 1962ರಿಂದ ಈವರೆಗೆ 12 ಚುನಾವಣೆಗಳು ನಡೆದಿವೆ. ಇದರಲ್ಲಿ ಕಾಂಗ್ರೆಸ್‌ ಐದು ಬಾರಿ ಜಯಗಳಿಸಿದೆ. ಎಡಪಕ್ಷಗಳ ಮತ್ತು ಶಿವಸೇನಾ ಅಭ್ಯರ್ಥಿಗಳೂ ಸಂಸತ್ತಿನಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಬಿಜೆಪಿ ಒಮ್ಮೆ ಮಾತ್ರ ಜಯ ಸಾಧಿಸಿದೆ. ಹೀಗಾಗಿ ಇದು ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿದೆ.

ಒಂದು ಕಾಲದಲ್ಲಿ ಜವಳಿ ಮಿಲ್‌ಗಳು ತುಂಬಿದ್ದ ಕ್ಷೇತ್ರವಿದು. ಇದು ಕಾರ್ಮಿಕ ಚಳವಳಿಯ ಕೇಂದ್ರವೂ ಆಗಿತ್ತು. ಹೀಗಾಗಿ ಇಲ್ಲಿ ಎಡಪಕ್ಷಗಳ ಪ್ರಭಾವವೂ ಜೋರಾಗಿದೆ.

ಕಾಂಗ್ರೆಸ್‌ ಈ ಸಲ ಪ್ರಿಯಾ ದತ್ ಅವರನ್ನು ಕಣಕ್ಕೆ ಇಳಿಸಿದೆ. ಪ್ರಿಯಾ ಅವರು ಕಾಂಗ್ರೆಸ್‌ನ ಹಿರಿಯ ರಾಜಕಾರಣಿಯಾಗಿದ್ದ ಸುನಿಲ್ ದತ್ ಅವರ ಮಗಳು ಮತ್ತು ನಟ ಸಂಜಯ್ ದತ್ ಅವರ ಸೋದರಿ. ಪ್ರಿಯಾ ದತ್ ಅವರಿಗೆ ರಾಜಕಾರಣ ಹೊಸದಲ್ಲ. ಸುನಿಲ್ ದತ್ ಅವರು ವಾಯವ್ಯ ಮುಂಬೈ ಲೋಕಸಭಾ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದಾರೆ. ಪ್ರಿಯಾ ಸಹ ಆ ಕ್ಷೇತ್ರವನ್ನು 2005ರಲ್ಲಿ ಪ್ರತಿನಿಧಿಸಿದ್ದರು. ಮುಂಬೈ ಉತ್ತರ ಕೇಂದ್ರ ಕ್ಷೇತ್ರವನ್ನೂ ಪ್ರಿಯಾ 2009ರಲ್ಲಿ ಪ್ರತಿನಿಧಿಸಿದ್ದರು.

ADVERTISEMENT

ಆದರೆ 2014ರಲ್ಲಿ ಪ್ರಿಯಾ ಅವರು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪೂನಂ ಮಹಾಜನ್ ಎದರು 1.86 ಲಕ್ಷ ಮತಗಳ ಅಂತರದಿಂದ ಸೋತಿದ್ದರು. ಹೀಗಾಗಿ ಈ ಬಾರಿ ಸ್ಪರ್ಧಿಸಲು ಪ್ರಿಯಾ ನಿರಾಕರಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿ ಕಣಕ್ಕೆ ಇಳಿದಿದ್ದಾರೆ.

ಪೂನಂ ಮಹಾಜನ್ ಅವರಿಗೂ ರಾಜಕಾರಣ ಹೊಸದಲ್ಲ. ಅವರ ತಂದೆ ಪ್ರಮೋದ್ ಮಹಾಜನ್ ಲೋಕಸಭಾ ಸದಸ್ಯರಾಗಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರೂ ಆಗಿದ್ದರು. ಆದರೆ ಪೂನಂ ಅವರೇ ಹೇಳಿಕೊಳ್ಳುವಂತೆ 2014ರಲ್ಲಿ ಅವರು ಗೆದ್ದಿದ್ದು ಮೋದಿ ಅಲೆಯಿಂದ. ಈ ಬಾರಿ ಮೋದಿಯ ಸುನಾಮಿ ಇದೆ, ಹೀಗಾಗಿ ಗೆಲುವು ನಿಶ್ಚಿತ ಎಂಬ ವಿಶ್ವಾಸ ಅವರದು.

***

ಗೆಲುವು ಊಹಿಸಲು ಅಸಾಧ್ಯ

* ರಾಹುಲ್ ಗಾಂಧಿ ಅವರ ಮನವೊಲಿಕೆಯ ನಂತರ ಪ್ರಿಯಾ ದತ್ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆ ಎಂಬುದು ಅವರ ವಿಶ್ವಾಸ. ಆದರೆ ಐದು ವರ್ಷಗಳಿಂದ ಕ್ಷೇತ್ರದ ಜನರಿಂದ ದೂರು ಉಳಿದಿದ್ದು ಅವರಿಗೆ ಮುಳುವಾಗುವ ಸಾಧ್ಯತೆ ಇದೆ

* ಪ್ರಿಯಾ ಪರವಾಗಿ ಅವರ ಸೋದರ ಮತ್ತು ನಟ ಸಂಜಯ್ ದತ್ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನ ಪ್ರಣಾಳಿಕೆಯನ್ನೇ ಪ್ರಿಯಾ ನೆಚ್ಚಿಕೊಂಡಿದ್ದಾರೆ

* ಮೋದಿ ಅಲೆಯಲ್ಲಿ ಗೆಲ್ಲುವೆ ಎಂದು ಹೇಳುತ್ತಿದ್ದರೂ ಪೂನಂ ಮಹಾಜನ್ ತಳಮಟ್ಟದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಬಿಜೆಪಿಯ ‘ಭಾರತೀಯ ಜನತಾ ಯುವ ಮೋರ್ಚಾ’ದ ರಾಷ್ಟ್ರೀಯ ಅಧ್ಯಕ್ಷೆಯೂ ಆಗಿರುವ ಪೂನಂ ಬೂತ್‌ಮಟ್ಟದ ಕಾರ್ಯಕರ್ತರ ಜತೆ ಉತ್ತಮ ಸಂಪರ್ಕ ಹೊಂದಿದ್ದಾರೆ

* ಪ್ರಾಣಿ ಹಕ್ಕುಗಳ ಹೋರಾಟಗಾರ್ತಿಯೂ ಆಗಿರುವ ಪೂನಂ ಅವರು ತಮ್ಮ ಸ್ವಯಂ ಸೇವಾ ಸಂಸ್ಥೆಯ ಮೂಲಕ ಜನರ ಮಧ್ಯೆ ಕೆಲಸ ಮಾಡಿದ್ದಾರೆ. ಈ ಬಾರಿ ಭಾರಿ ಉತ್ಸಾಹದಲ್ಲಿ ಪ್ರಚಾರ ಮಾಡುತ್ತಿದ್ದಾರೆ

* ಈ ಕ್ಷೇತ್ರದಲ್ಲಿ ಮರಾಠಿ, ಹಿಂದಿ, ಉರ್ದು, ಗುಜರಾತಿ, ಬಂಗಾಳಿ, ಕನ್ನಡ, ಬೋಜಪುರಿ ಸೇರಿದಂತೆ 15 ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಈಗಲೂ ಇದು ಕೈಗಾರಿಕಾ ಕೇಂದ್ರವಾಗಿಯೇ ಇದೆ. ಹೀಗಾಗಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ವರ್ಗದ ಮತದಾರರ ವಿಶ್ವಾಸ ಪಡೆದವರು ಗೆಲುವು ಸಾಧಿಸುವುದು ಸುಲಭ

* 17 ಲಕ್ಷಕ್ಕಿಂತ ಹೆಚ್ಚು ಮತದಾರಿರುವ ಈ ಕ್ಷೇತ್ರದಲ್ಲಿ ಹಿಂದಿನ ಎರಡು ಲೋಕಸಭಾ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಶೇ 50ನ್ನು ದಾಟಿಲ್ಲ. ಹೀಗಾಗಿ ಯಾರಿಗೆ ಹೆಚ್ಚು ಮತ ಬೀಳಲಿದೆ ಎಂಬುದನ್ನು ಊಹಿಸುವುದು ಕಷ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.