ಮುಂಬೈ: ಮುಂಬೈನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲ್ಘರ್ ಜಿಲ್ಲೆಯ ವಾಸೈ ಪಟ್ಟಣದಲ್ಲಿ ರಸ್ತೆ ಮತ್ತು ಮನೆಗಳ ಒಳಗೆ ನೀರು ನುಗ್ಗಿದ್ದು, 300ಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಸ್ ಮತ್ತು ರೈಲು ಸಂಚಾರ ದುಸ್ತರವಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದರೊಂದಿಗೆ ರಸ್ತೆ–ಗುಂಡಿಗಳು ಸಮಸ್ಯೆಯನ್ನು ದುಪ್ಪಟ್ಟಾಗಿಸಿವೆ.
ಶಾಲಾ–ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ‘ಮಳೆಯ ಕಾರಣ ಸೋಮವಾರ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಮುಂದೆ ಪರೀಕ್ಷೆ ನಡೆಸಲಾಗುವುದು’ ಎಂದು ಮುಂಬೈ ವಿಶ್ವವಿದ್ಯಾಲಯ ಹೇಳಿದೆ.
ಭಾರಿ ಮಳೆಯ ಕಾರಣ, ನಾಗ್ಪುರದಲ್ಲಿನ ವಿಧಾನಭವನಕ್ಕೂ ನೀರು ನುಗ್ಗಿದಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತನಿಖೆಗೆ ಆದೇಶಿಸಿದ್ದಾರೆ.
ನಾಗ್ಪುರದ ವಿಧಾನಭವನದಲ್ಲಿ ಮಳೆಗಾಲದ ಅಧಿವೇಶನ ನಡೆಯುತ್ತಿತ್ತು. ಆದರೆ, ಶುಕ್ರವಾರ ಮಳೆಯ ನೀರು ನುಗ್ಗಿದ್ದ ಕಾರಣ ಸದನವನ್ನು ಮುಂದೂಡಲಾಗಿತ್ತು.
ಕಳೆದ 24 ತಾಸಿನಲ್ಲಿ ದಕ್ಷಿಣ ಮುಂಬೈನ ಕೊಲಬಾದಲ್ಲಿ 170.6 ಮಿ.ಮೀ. ಮಳೆಯಾಗಿದೆ. ಇದು ಈ ಋತುವಿನಲ್ಲಿ ಸುರಿದ ಅತ್ಯಧಿಕ ಪ್ರಮಾಣದ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.