ಮುಂಬೈ: ಮುಂಬೈನಲ್ಲಿ ಸತತ ನಾಲ್ಕನೇ ದಿನವೂ ಭಾರಿ ಮಳೆ ಮುಂದುವರೆದಿದೆ. ಮಂಗಳವಾರ ಸುರಿದ ಭಾರಿ ಮಳೆಗೆ ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದವು.
ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ–ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ಮತ್ತು ಷೇರು ಪೇಟೆ ಕಾರ್ಯನಿರ್ವಹಿಸಿದವು. ಬೆಳಿಗ್ಗೆ ಮಳೆ ಸ್ವಲ್ಪ ಬಿಡುವು ಕೊಟ್ಟ ಕಾರಣ, ಜನರು ಕೆಲಸಕ್ಕೆ ತೆರಳಿದ್ದರು. ಆದರೆ ಮಧ್ಯಾಹ್ನದಿಂದ ಮಳೆ ಬಿರುಸುಗೊಂಡು ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾದ ಕಾರಣ ಜನರು ಮನೆಗೆ ತೆರಳಲು ಪರದಾಡಬೇಕಾಯಿತು. ನಗರದ ತಗ್ಗಿನ ಪ್ರದೇಶಗಳನ್ನು ಹಾದುಹೋಗುವ ಮಾರ್ಗಗಳಲ್ಲಿ ಹಳಿಗಳ ಮೇಲೆ ಹಲವು ಅಡಿಗಳಷ್ಟು ನೀರು ನಿಂತಿದ್ದ ಕಾರಣ ಹಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ಸಾವಿರಾರು ಪ್ರಯಾಣಿಕರು ಮೊಣಕಾಲುದ್ದ ನಿಂತಿದ್ದ ಮಳೆ ನೀರಿನಲ್ಲಿ ನಡೆದುಕೊಂಡೇ ಮನೆ ಸೇರಿದ್ದಾರೆ.
ಮಂದಬೆಳಕಿನ ಕಾರಣ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಕಾರ್ಯಾಚರಣೆ ಅಸ್ತವ್ಯಸ್ತವಾಗಿತ್ತು. ಹಲವು ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿತ್ತು.
‘ತಗ್ಗಿನ ಪ್ರದೇಶಗಳಿಂದ ನೀರನ್ನು ಹೊರಹಾಕಲು ಭಾರಿ ಸಾಮರ್ಥ್ಯದ ಪಂಪ್‌ಗಳನ್ನು ಬಳಸಲಾಗುತ್ತಿದೆ. ಆದರೆ ಬಿಡುವು ಕೊಡದೇ ಮಳೆ ಸುರಿಯುತ್ತಿರುವುದರಿಂದ ನೀರು ಇಳಿಯುತ್ತಿಲ್ಲ’ ಎಂದು ಮುಂಬೈ ಮಹಾನಗರ ಪಾಲಿಕೆ ಮೂಲಗಳು ಮಾಹಿತಿ ನೀಡಿವೆ.
ಪಾಲಘರ್ ತತ್ತರ:ಭಾರಿ ಮಳೆಗೆ ರಾಜ್ಯದ ಪಾಲಘರ್ ಜಿಲ್ಲೆ ತತ್ತರಿಸಿದೆ. ಜಿಲ್ಲೆಯ ಹಲವು ಗ್ರಾಮಗಳು ಎಲ್ಲಾ ರೀತಿಯ ಸಂಪರ್ಕ ಕಡಿದುಕೊಂಡು ದ್ವೀಪದಂತಾಗಿವೆ. ಆ ಗ್ರಾಮಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಮಳೆ ಮತ್ತಷ್ಟು ಜೋರಾದ ಕಾರಣ ಸ್ಥಗಿತಗೊಳಿಸಲಾಯಿತು.
ಜನಜೀವನ ಅಸ್ತವ್ಯಸ್ತ:
ಮುಂಬೈ: ಮುಂಬೈನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಲ್ಘರ್ ಜಿಲ್ಲೆಯ ವಾಸೈ ಪಟ್ಟಣದಲ್ಲಿ ರಸ್ತೆ ಮತ್ತು ಮನೆಗಳ ಒಳಗೆ ನೀರು ನುಗ್ಗಿದ್ದು, 300ಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಸ್ ಮತ್ತು ರೈಲು ಸಂಚಾರ ದುಸ್ತರವಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ಇದರೊಂದಿಗೆ ರಸ್ತೆ–ಗುಂಡಿಗಳು ಸಮಸ್ಯೆಯನ್ನು ದುಪ್ಪಟ್ಟಾಗಿಸಿವೆ.
ಶಾಲಾ–ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ‘ಮಳೆಯ ಕಾರಣ ಸೋಮವಾರ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಮುಂದೆ ಪರೀಕ್ಷೆ ನಡೆಸಲಾಗುವುದು’ ಎಂದು ಮುಂಬೈ ವಿಶ್ವವಿದ್ಯಾಲಯ ಹೇಳಿದೆ.
ಭಾರೀ ಮಳೆಯ ಕಾರಣ, ನಾಗ್ಪುರದಲ್ಲಿನ ವಿಧಾನಭವನಕ್ಕೂ ನೀರು ನುಗ್ಗಿದಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಮುಖ್ಯಮಂತ್ರಿ ದೇವೇಂದ್ರ ಫಡನವೀಸ್ ಆದೇಶಿಸಿದ್ದಾರೆ. ನಾಗ್ಪುರದ ವಿಧಾನಭವನದಲ್ಲಿ ಮಳೆಗಾಲದ ಅಧಿವೇಶನ ನಡೆಯುತ್ತಿತ್ತು. ಆದರೆ, ಶುಕ್ರವಾರ ಮಳೆಯ ನೀರು ನುಗ್ಗಿದ್ದ ಕಾರಣ ಸದನವನ್ನು ಮುಂದೂಡಲಾಗಿತ್ತು.
ಕಳೆದ 24 ತಾಸಿನಲ್ಲಿ ದಕ್ಷಿಣ ಮುಂಬೈನ ಕೊಲಬಾದಲ್ಲಿ 170.6 ಮಿ.ಮೀ. ಮಳೆಯಾಗಿದೆ. ಇದು ಈ ಋತುವಿನಲ್ಲಿ ಸುರಿದ ಅತ್ಯಧಿಕ ಪ್ರಮಾಣದ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಷಣ ಕ್ಷಣದ ಅಪ್‍ಡೇಟ್
* ಎಸಿ ಲೋಕಲ್ ರೈಲು ಸ್ಧಗಿತ
ನಲ್ಲಸೊಪಾರ ಸುತ್ತಲಿನ ಪ್ರದೇಶಗಳು ಜಲಾವೃತವಾಗಿರುವುದರಿಂದ ಎಸಿ ಲೋಕಲ್ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೇ ಟ್ವೀಟ್ ಮಾಡಿದೆ.
* ನಗರದ ರಸ್ತೆಗಳಲ್ಲಿ ನೀರು ತುಂಬಿರುವುದರಿಂದ ಬೆಸ್ಟ್ ಬಸ್‍ಗಳು ಬೇರೆ ದಾರಿಯಾಗಿ ಸಂಚರಿಸುತ್ತಿವೆ.
* ಮಳೆಯಿಂದಾಗಿ 84 ವಿಮಾನಗಳು 26 ನಿಮಿಷ ತಡವಾಗಿ ಮುಂಬೈ ವಿಮಾನ ನಿಲ್ದಾಣದಿಂದ ಹೊರಡಿವೆ
* ಗಾಂಧಿ ಮಾರ್ಕೆಟ್, ಸಿಯಾನ್ ಪನವೇಲ್ ಹೈವೇ, ಚೆಂಬೂರ್ ಮತ್ತು ವಡಾಲಾ ಸಂಪೂರ್ಣ ಜಲಾವೃತ
* ಭಾರೀ ಮಳೆಯಿಂದಾಗಿ ರೈಲ್ವೆ ಹಳಿಯಲ್ಲಿ 200ಮಿಮೀ ನೀರು ನಿಂತುಕೊಂಡಿದ್ದು, ವಾಸೈ ರಸ್ತೆ -ವಿರಾರ್ ನಡುವಿನ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.ಚರ್ಚ್ ಗೇಟ್- ವಾಸೈ ಮಧ್ಯೆ ಇರುವ ರೈಲು ತಡವಾಗಿ ಸಂಚರಿಸುತ್ತಿದೆ.
* ರಬೋಡಿ ಕೊಂಕಣಿ ಖಬರಿಸ್ತಾನದ 30 ಅಡಿ ಎತ್ತರದ ಕಾಂಪೌಂಡ್ ಗೋಡೆ ಕುಸಿದು ಬಿದ್ದು ವಾಹನಗಳಿಗೆ ಹಾನಿ
* ಕೆಲಸ ನಿಲ್ಲಿಸಿದ ಡಬ್ಬಾವಾಲಾಗಳು
ಮಳೆಯಿಂದಾಗಿ ಟಿಫಿನ್ ಬಾಕ್ಸ್ ಸಂಗ್ರಹ ಸಾಧ್ಯವಾಗುವುದಿಲ್ಲ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಸೈಕಲ್ ಓಡಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ನಾವು ಡಬ್ಬಾವಾಲಾಗಳು ಇಂದು ಕೆಲಸ ಮಾಡುವುದಿಲ್ಲ ಎಂದು ಮುಂಬೈ ಡಬ್ಬಾವಾಲಾಗಳ ಸಂಘದ ವಕ್ತಾರ ಸುಭಾಶ್ ತಲೇಕರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.