ಮುಂಬೈ: ಮುಂಬೈಯಲ್ಲಿ ಆನ್‌ಲೈನ್ ಷೇರು ವಹಿವಾಟು ವಂಚನೆ ಪ್ರಕರಣದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಆತನ ಕುಟುಂಬ ಸದಸ್ಯರು ಸುಮಾರು ₹5.14 ಕೋಟಿ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹಣಕಾಸು ವ್ಯವಹಾರ ನಡೆಸಲು ಸೈಬರ್ ವಂಚಕರಿಗೆ ಬ್ಯಾಂಕ್ ಖಾತೆ ಒದಗಿಸಿದ್ದ ಟ್ಯೂಷನ್ ಶಿಕ್ಷಕ ಮತ್ತು ಸೆಕ್ಯೂರಿಟಿ ಗಾರ್ಡ್‌ನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ವಂಚನೆ ಕುರಿತು ಸಕಿನಾಕಾ ನಿವಾಸಿ ಸಾಫ್ಟ್‌ವೇರ್ ಎಂಜಿನಿಯರ್ ಏಪ್ರಿಲ್‌ನಲ್ಲಿ ಮುಂಬೈ ಅಪರಾಧ ವಿಭಾಗದ ಸೈಬರ್ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಜನವರಿಯಲ್ಲಿ ಆನ್‌ಲೈನ್ ಷೇರು ವ್ಯಾಪಾರಿಗಳ ವಾಟ್ಸ್ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದು, ಷೇರು ವಹಿವಾಟಿನಲ್ಲಿ ಹೂಡಿಕೆ ಮಾಡುವ ಇಚ್ಫೆಯನ್ನು ವ್ಯಕ್ತಪಡಿಸಿದ್ದೆ. ಬಳಿಕ ಕರೆಯೊಂದನ್ನು ಸ್ವೀಕರಿಸಿದ್ದು, ತರಬೇತಿಗೆ ಸೇರಿಕೊಳ್ಳುವಂತೆ ತಿಳಿಸಲಾಯಿತು ಎಂದು ದೂರುದಾರರು ತಮ್ಮ ದೂರಿನಲ್ಲಿ ವಿವರಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ದೂರುದಾರರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದು, ಅವರ ವರ್ಚುವಲ್ ಖಾತೆಯನ್ನು ತೆರೆದಿದ್ದಾರೆ. ನಂತರ ಷೇರು ವಹಿವಾಟಿನಲ್ಲಿ ಹಣ ಹೂಡಲು ಆರಂಭಿಸಿದ್ದು, ಅವರ ಕುಟುಂಬ ಸದಸ್ಯರು ಇದನ್ನು ಅನುಸರಿಸಿ ಎರಡು ತಿಂಗಳಲ್ಲಿ ಸುಮಾರು ₹5.14 ಕೋಟಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ತರು ತಮ್ಮ ಹಣವನ್ನು ಡೆಪಾಸಿಟ್ ಮಾಡಿದ್ದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ಸೆಕ್ಯೂರಿಟಿ ಗಾರ್ಡ್ ಹಂಪ್ರೀತ್ ಸಿಂಗ್ ರಾಂಧ್ವಾ ಅವರಿಗೆ ಸೇರಿದ್ದು ಎಂಬುದು ತನಿಖೆಯ ಸಂದರ್ಭದಲ್ಲಿ ಕಂಡುಬಂದಿದೆ. ವಿಮಲ್‌ಪ್ರಕಾಶ್ ಗುಪ್ತಾ ಎಂಬ ಟ್ಯೂಷನ್ ಶಿಕ್ಷಕ ತನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಹಣಕಾಸಿನ ವ್ಯವಹಾರಗಳಿಗೆ ಸೈಬರ್ ವಂಚಕರಿಗೆ ನೀಡಿರುವುದಾಗಿ ರಾಂಧ್ವಾ ತನಿಖೆ ವೇಳೆ ಹೇಳಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಗುಪ್ತಾ ಅವರನ್ನು ಮುಂಬೈನ ಗೋರೆಗಾಂವ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಟೆಲಿಗ್ರಾಮ್ ಆ್ಯಪ್ ಮೂಲಕ ಗುಪ್ತಾ, ಸೈಬರ್ ವಂಚಕರೊಂದಿಗೆ ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ. ಬ್ಯಾಂಕ್ ಖಾತೆಗಳನ್ನು ಹಣಕಾಸಿನ ವಹಿವಾಟುಗಳಿಗೆ ಬಳಸಲು ಸಹಾಯ ಮಾಡಿದರೆ ಗುಪ್ತಾ ಅವರಿಗೆ ವಂಚಕರು ಹಣವನ್ನು ನೀಡುತ್ತಿದ್ದರು ಎಂಬುದೂ ಗೊತ್ತಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.