ನವದೆಹಲಿ: ಮುಂಬೈನ 26/11 ಉಗ್ರ ಕೃತ್ಯದ ರೂವಾರಿಗಳನ್ನು ನ್ಯಾಯಾಂಗದ ಮುಂದೆ ತರಲೇಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದರು.
2008ರ ನವೆಂಬರ್‌ನಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಯ 14ನೇ ವರ್ಷದ ಸ್ಮರಣಾರ್ಥ ಟ್ವೀಟ್ ಮಾಡಿದ ಜೈಶಂಕರ್, ಭಯೋತ್ಪಾದನೆಯು ಮಾನವೀಯತೆಗೆ ತೊಡಕಾಗಿದೆ. 26/11 ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಸ್ಮರಣಾರ್ಥ ಇಂದು ವಿಶ್ವವು ಭಾರತದ ಜೊತೆಯಾಗಿದೆ ಎಂದರು.
ಉಗ್ರ ಕೃತ್ಯದ ಹಿಂದಿರುವ ರೂವಾರಿಗಳನ್ನು ಕಾನೂನಿನ ಅಡಿ ತರಲೇಬೇಕು. ಭಯೋತ್ಪಾದನಾ ದಾಳಿಯಿಂದ ಮೃತಪಟ್ಟ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಾರ್ಥ ಸ್ಮರಿಸುತ್ತಿದ್ದೇವೆ. ಉಗ್ರರ ದಾಳಿಯಿಂದ ಆಘಾತಕ್ಕೆ ಒಳಗಾದ ವಿದೇಶಿ ಪ್ರಜೆಗಳಿಗೆ ಸಾಂತ್ವನ ಹೇಳುವುದು ಮತ್ತು ದುಷ್ಕರ್ಮಿಗಳನ್ನು ನ್ಯಾಯಾಂಗದ ಮುಂದೆ ತರಲು ಶ್ರಮಿಸುತ್ತಿರುವ ಅಂತರರಾಷ್ಟ್ರೀಯ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಭಯೋತ್ಪಾದನೆ ವಿಚಾರದಲ್ಲಿ ಭಾರತ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ನ್ಯಾಯ ಸಿಗುವ ವರೆಗೆ ನಮ್ಮ ಹೋರಾಟವನ್ನು ಬಿಟ್ಟುಬಿಡುವುದಿಲ್ಲ ಎಂದರು.
2008ರಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 140 ಭಾರತೀಯರು ಮತ್ತು 23 ರಾಷ್ಟ್ರಗಳ 26 ನಾಗರಿಕರು ಪ್ರಾಣ ಕಳೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.