ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈ ಮೇಲೆ 2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕರ ದಾಳಿ ವೇಳೆ, ಉಗ್ರರ ವಿರುದ್ಧ ಹೋರಾಡಿ ಹುತಾತ್ಮರಾದವರಿಗೆ ಶುಕ್ರವಾರ ಗೌರವ ಸಲ್ಲಿಸಲಾಯಿತು.
ದಕ್ಷಿಣ ಮುಂಬೈನಲ್ಲಿರುವ ಪೊಲೀಸ್ ಇಲಾಖೆ ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ, ಉಪಮುಖ್ಯಮಂತ್ರಿ ಅಜಿತ್ ಪವಾರ್, ಗೃಹ ಸಚಿವ ದಿಲೀಪ್ ವಲ್ಸೆಪಾಟೀಲ್ ಅವರು ಹುತಾತ್ಮರ ಸ್ಮಾರಕ್ಕೆ ಹೂಗುಚ್ಛ ಇರಿಸಿ, ಗೌರವ ಸಲ್ಲಿಸಿದರು.
ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಚೇತರಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಹ, ಹುತಾತ್ಮರಾದ ಪೊಲೀಸರು ಹಾಗೂ ಯೋಧರ ತ್ಯಾಗ, ಬಲಿದಾನವನ್ನು ಸ್ಮರಿಸಿದರು. ಕೆಲ ಹುತಾತ್ಮರ ಕುಟುಂಬದ ಸದಸ್ಯರೂ ಶ್ರದ್ಧಾಂಜಲಿ ಸಲ್ಲಿಸಿದರು.
2008ರ ನ. 26ರಂದು ಲಷ್ಕರ್–ಎ–ತೈಯಬಾ ಸಂಘಟನೆ ಉಗ್ರರು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಿ, ಗುಂಡಿನ ದಾಳಿ ನಡೆಸಿದ್ದರು. 18 ಜನ ಭದ್ರತಾ ಸಿಬ್ಬಂದಿ ಸೇರಿದಂತೆ 166 ಜನರು ಈ ಘಟನೆಯಲ್ಲಿ ಮೃತಪಟ್ಟಿದ್ದರು.
ಉಗ್ರರ ದಾಳಿ ಘಟನೆಗೆ 13 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೀಮಿತ ಸಂಖ್ಯೆಯ ಜನರಿಗೆ ಅವಕಾಶ ನೀಡಲಾಗಿತ್ತು. ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.