ಮುಂಬೈ: ನಗರದಲ್ಲಿ 26/11 ಮಾದರಿಯಲ್ಲಿ ದಾಳಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಆರು ಮಂದಿಯ ತಂಡ ಈ ಕಾರ್ಯಕ್ಕೆ ನಿಯೋಜನೆಗೊಂಡಿದೆ ಎಂಬ ಬೆದರಿಕೆಯ ಸಂದೇಶಗಳನ್ನು ಮುಂಬೈ ಸಂಚಾರ ಪೊಲೀಸರ ಸಹಾಯವಾಣಿ ಸಂಖ್ಯೆಗೆ (ವಾಟ್ಸ್‌ಆ್ಯಪ್) ರವಾನಿಸಲಾಗಿದೆ.
‘ಪಾಕಿಸ್ತಾನದ ‘ಕೋಡ್’ ಹೊಂದಿರುವ ದೂರವಾಣಿ ಸಂಖ್ಯೆಯಿಂದ ಸಂದೇಶಗಳು ಬಂದಿವೆ’ ಎಂದು ನಗರ ಪೊಲೀಸ್ ಕಮಿಷನರ್ ವಿವೇಕ್ ಫನ್ಸಲ್‌ಕರ್ ಶನಿವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಸಹಾಯವಾಣಿ ಸಂಖ್ಯೆಗೆ ಸಂದೇಶಗಳು ಬಂದಿವೆ. ಅದರಲ್ಲಿ 26/11 ಮುಂಬೈ ದಾಳಿಯ ರೂವಾರಿಯಾಗಿದ್ದ ಉಗ್ರ ಅಜ್ಮಲ್ ಕಸಬ್ ಹಾಗೂ ಇತ್ತೀಚೆಗೆ ಹತ್ಯೆಯಾಗಿದ್ದ ಅಲ್ ಕೈದಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥನಾಗಿದ್ದ ಅಯ್ಮನ್ ಅಲ್ ಜವಾಹಿರಿ ಹೆಸರನ್ನು ಪ್ರಸ್ತಾಪಿಸಲಾಗಿದೆ. ಭಾರತದಲ್ಲಿರುವ ತಮ್ಮ ಸಹವರ್ತಿಗಳು ಸ್ಫೋಟಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದೂ ಉಲ್ಲೇಖಿಸಲಾಗಿದೆ. ಭಯೋತ್ಪಾದನಾ ನಿಗ್ರಹ ದಳದವರು (ಎಟಿಎಸ್) ತನಿಖೆ ಆರಂಭಿಸಿದ್ದಾರೆ. ನಗರದೆಲ್ಲೆಡೆ ಪೊಲೀಸರು ಹದ್ದಿನ ಕಣ್ಣು ನೆಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.
‘ಈ ಸಂದೇಶವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕರಾವಳಿ ಕಾವಲುಪಡೆಯವರೊಂದಿಗೆನಮ್ಮ ಸಿಬ್ಬಂದಿ ನಿರಂತರ ಸಂಪರ್ಕದಲ್ಲಿರಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ‘ಸಾಗರ್ ಕವಚ’ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಸಂದೇಶದ ಸಂಬಂಧ ವರ್ಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದೂ ಮಾಹಿತಿ ನೀಡಿದ್ದಾರೆ.
‘ವರ್ಲಿಯಲ್ಲಿರುವ ಸಂಚಾರ ಪೊಲೀಸರ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆಗೆ ಬೆದರಿಕೆಯ ಸರಣಿ ಸಂದೇಶಗಳು ಬಂದಿದ್ದವು. ಆರು ಮಂದಿಯ ತಂಡ ಸ್ಫೋಟ ಕಾರ್ಯ ನಡೆಸಲಿದೆ ಎಂದು ಒಂದು ಸಂದೇಶದಲ್ಲಿ ಹೇಳಲಾಗಿತ್ತು. ಮತ್ತೊಂದು ಸಂದೇಶದಲ್ಲಿ ಈ ಕಾರ್ಯಕ್ಕೆ ಈಗಾಗಲೇ ಸಿದ್ಧತೆ ಆರಂಭಗೊಂಡಿದೆ. 2008ರ ನವೆಂಬರ್ 26ರ ಕರಾಳ ನೆನಪುಗಳು ಮತ್ತೆ ಮರುಕಳಿಸುವಂತೆ ಮಾಡಲಾಗುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸುವಂತೆ ಅಪರಾಧ ವಿಭಾಗದ ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗುರುವಾರ ರಾಯಗಡದ ಕರಾವಳಿ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ವಿಹಾರ ನೌಕೆಯೊಂದು ಪತ್ತೆಯಾಗಿತ್ತು. ವಿಹಾರ ನೌಕೆಯು ಆಸ್ಟ್ರೇಲಿಯಾದ ಮಹಿಳೆಯೊಬ್ಬರಿಗೆ ಸೇರಿದ್ದು, ಭಯೋತ್ಪಾದಕತೆಯ ಯಾವ ಉದ್ದೇಶವೂ ಅದರ ಹಿಂದೆ ಅಡಕವಾಗಿಲ್ಲ ಎಂದು ಗೃಹ ಸಚಿವ ದೇವೇಂದ್ರ ಫಡಣವೀಸ್ ಸ್ಪಷ್ಟಪಡಿಸಿದ್ದರು.
‘ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲಿ’: ‘ಮಹಾರಾಷ್ಟ್ರ ಸರ್ಕಾರವು ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಬೇಕು. ಕೇಂದ್ರೀಯ ತನಿಖಾ ಸಂಸ್ಥೆಗಳೂ ಇದರೆಡೆ ಗಮನಹರಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಒತ್ತಾಯಿಸಿದ್ದಾರೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.