ಮುಂಬೈ: ಭಯೋತ್ಪಾದಕರ ದಾಳಿಯ ವೇಳೆ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾದವರಿಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮತ್ತು ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಶನಿವಾರ ನಮನ ಸಲ್ಲಿಸಿದರು.
ದಾಳಿಯ 14ನೇ ವರ್ಷಾಚರಣೆಯ ಅಂಗವಾಗಿ ದಕ್ಷಿಣ ಮುಂಬೈನ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಸಚಿವ ದೀಪಕ್ ಕೇಸರ್ಕರ್, ಮುಖ್ಯ ಕಾರ್ಯದರ್ಶಿ ಮನು ಕುಮಾರ್ ಶ್ರೀವಾಸ್ತವ್, ಡಿಜಿಪಿ ರಜನೀಶ್ ಸೇಠ್, ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ದಾಳಿಯಲ್ಲಿ ಹುತಾತ್ಮರಾದ ಪೊಲೀಸರ ಕುಟುಂಬ ಸದಸ್ಯರು ಕೂಡ ನಮನ ಸಲ್ಲಿಸಿದರು. 2008ರ ನವೆಂಬರ್ 26ರಂದು ಪಾಕಿಸ್ತಾನದ 10 ಮಂದಿ ಭಯೋತ್ಪಾದಕರು ನಡೆಸಿದ್ದ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು.
ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಮುಖ್ಯಸ್ಥ ಹೇಮಂತ್ ಕರ್ಕರೆ, ಸೇನೆಯ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮಂಬೈನ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಶೋಕ್ ಕಾಮ್ಟೆ, ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಸಾಲಸ್ಕರ್ ಮೊದಲಾದವರು ಹುತಾತ್ಮರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.