ನಾಗಪುರ: ಒಂದು ವೇಳೆ ಮುಂಬೈನಲ್ಲಿರುವ ಉತ್ತರ ಭಾರತೀಯರು ಮುಷ್ಕರ ಹೂಡಿದರೆ, ಇಡೀ ಮಹಾನಗರ ಸ್ಥಬ್ಧವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ.
ಉತ್ತರ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮತನಾಡಿದರು.
‘ಉತ್ತರ ಭಾರತೀಯರು ಇಂತದ ನಿರ್ಧಾರ ತೆಗೆದುಕೊಂಡರೆ, ಮುಂಬೈ ವಾಸಿಗಳಿಗೆ ತಿನ್ನಲು ರೊಟ್ಟಿಯೂ ಸಿಗುವುದಿಲ್ಲ. ಆದರೆ ಅವರು ಎಂದಿಗೂ ಹಾಗೆ ಮಾಡಬಾರದು’ ಎಂದು ನಿರುಪಮ್ ಹೇಳಿದರು. ಹೀಗೆ ಹೇಳುವಾಗ ಅವರು ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಹೆಸರನ್ನು ಉಲ್ಲೇಖಿಸಲಿಲ್ಲ.
‘ಮುಂಬೈ ಜನರ ಜವಾಬ್ದಾರಿಯನ್ನು ಇವರು ಹೆಗಲ ಮೇಲೆ ಹೊತ್ತಿದ್ದಾರೆ. ಹಾಲು, ಪತ್ರಿಕೆ, ತರಕಾರಿಗಳನ್ನು ನಿತ್ಯ ಪೂರೈಸುವವರು ಇವರೇ. ಆಟೊರಿಕ್ಷಾ ಹಾಗೂ ಟ್ಯಾಕ್ಸಿ ಸೇವೆ ಕೂಡಾ ಈ ಸಮುದಾಯದಿಂದಲೇ ಆಗುತ್ತಿದೆ. ಇವರೆಲ್ಲರೂ ಮುಂಬೈ ಹಾಗೂ ಮಹಾರಾಷ್ಟ್ರಕ್ಕೆ ಕೃತಜ್ಞರಾಗಿದ್ದಾರೆ’ ಎಂದು ನಿರುಪಮ್ ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಉಪಸ್ಥಿತರಿದ್ದರು.
*
ವಿದ್ಯಾರ್ಥಿನಿಯರ ಮೇಲೆ ಹಲ್ಲೆ: 9 ಮಂದಿ ಬಂಧನ
ಪಟ್ನಾ(ಪಿಟಿಐ): ಕಿರುಕುಳ ವಿರೋಧಿಸಿದ 34 ಬಾಲಕಿಯರ ಮೇಲೆ ಗೂಂಡಾಗಳ ಗುಂಪೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಜನರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
‘ಬಂಧಿತರಲ್ಲಿ ಅಪ್ರಾಪ್ತ ವಯಸ್ಕನೂ ಸೇರಿದ್ದಾನೆ. ಉಳಿದವರ ವಯಸ್ಸನ್ನು ಖಾತ್ರಿಪಡಿಸಿಕೊಳ್ಳಲು ಜನ್ಮ ದಿನಾಂಕ ದೃಢೀಕರಣ ಪತ್ರವನ್ನು ಕೇಳಲಾಗಿದೆ. ಇತರರ ಪತ್ತೆಗಾಗಿ ಕ್ರಮ ಕೈಗೊಂಡಿದ್ದೇವೆ’ ಎಂದು ತ್ರಿವೇಣಿಗಂಜ್‌ನ ಎಎಸ್‌ಪಿ ತಿಳಿಸಿದ್ದಾರೆ.
ಸುಪೌಲ್ ಜಿಲ್ಲೆಯ ತ್ರಿವೇಣಿಗಂಜ್‌ನಲ್ಲಿನ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಹಲ್ಲೆ ನಡೆದಿತ್ತು.
ನಜೀಬ್ ನಾಪತ್ತೆ: ತನಿಖೆ ಸಮಾಪ್ತಿ
ನವದೆಹಲಿ (ಪಿಟಿಐ): ಎರಡು ವರ್ಷಗಳಿಂದ ನಾಪತ್ತೆಯಾಗಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ನಜೀಬ್ ಅಹ್ಮದ್ ಪ್ರಕರಣದ ತನಿಖೆಯನ್ನು ಸಮಾಪ್ತಿಗೊಳಿಸಿ, ವರದಿ ಸಲ್ಲಿಸಲು ಸಿಬಿಐಗೆ ದೆಹಲಿ ಹೈಕೋರ್ಟ್ ಸೋಮವಾರ ಅನುಮತಿ ನೀಡಿತು.
ಪ್ರಕರಣದ ತನಿಖೆಯಿಂದ ಸಿಬಿಐ ಅನ್ನು ಹೊರಗಿಟ್ಟು, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ನಜೀಬ್ ಅವರ ತಾಯಿ ಫಾತಿಮಾ ನಫೀಸ್ ಅವರು 2016ರ ನವೆಂಬರ್ 25ರಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಮುರಳೀಧರ ಮತ್ತು ವಿನೋದ್ ಗೋಯಲ್ ಅವರಿದ್ದ ಪೀಠ ನಿರಾಕರಿಸಿ, ಪ್ರಕರಣವನ್ನು ವಿಲೇವಾರಿ ಮಾಡಿತು.
ದಾಳಿ ಭೀತಿ: 20 ಸಾವಿರ ಜನರ ವಲಸೆ
ಅಹಮದಾಬಾದ್ (ಪಿಟಿಐ): ದಾಳಿ ನಡೆಯುವ ಭೀತಿಯಿಂದ 20 ಸಾವಿರ ಹಿಂದಿ ಭಾಷಿಕರು ಗುಜರಾತ್ ತೊರೆದಿದ್ದಾರೆ ಎಂದು ಉತ್ತರ ಭಾರತೀಯ ವಿಕಾಸ್ ಪರಿಷತ್ ಅಧ್ಯಕ್ಷ ಮಹೇಶ್ ಸಿಂಗ್ ಕುಶ್ವಾಹ ಹೇಳಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ, ಹಿಂಸಾಚಾರದಲ್ಲಿ ತೊಡಗದಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
ಸಬರ್‌ಕಾಂತ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 28ರಂದು 14 ತಿಂಗಳ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಸಂಬಂಧ ಉತ್ತರ
ಗುಜರಾತಿನ ಆರುಜಿಲ್ಲೆಗಳಲ್ಲಿ ಹಿಂದಿ ಭಾಷಿಕರ ಮೇಲೆ ದಾಳಿಗಳು ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.