ಮುಂಬೈ: ಜೆಎಸ್‌ಡಬ್ಲ್ಯು ಸಮೂಹದ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪದಡಿ ದೂರು ನೀಡಿದ್ದು, ಇಲ್ಲಿನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಹಿಳೆಯ ಆರೋಪವನ್ನು ಜಿಂದಾಲ್ ಅಲ್ಲಗಳೆದಿದ್ದಾರೆ.
ದೂರು ನೀಡಿರುವ ಮುಂಬೈನ 30 ವರ್ಷದ ಮಹಿಳೆ, ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ತಮ್ಮನ್ನು ನಟಿ ಎಂದು ಪರಿಚಯಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ದುಬೈನಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರ ವೇಳೆ ಮಹಿಳೆಯು ಜಿಂದಾಲ್ (64) ಅವರನ್ನು ಭೇಟಿಯಾಗಿದ್ದರು.
2022ರ ಜನವರಿ 24 ರಂದು ಮುಂಬೈನ ಜೆಎಸ್‌ಡಬ್ಲ್ಯು ಸಮೂಹದ ಕೇಂದ್ರ ಕಚೇರಿಗೆ ಹೋಗಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ನನ್ನೊಂದಿಗೆ ಸ್ನೇಹ ಬೆಳೆಸಿದ್ದರು ಎಂದೂ ಹೇಳಿದ್ದಾರೆ.
ಸಂತ್ರಸ್ತೆಯು ಈ ವರ್ಷ ಫೆ.16 ರಂದು ದೂರು ನೀಡಿದ್ದರೂ, ಬಿಕೆಸಿ ಠಾಣೆಯಲ್ಲಿ ಡಿಸೆಂಬರ್ 13 ರಂದು ಐಪಿಸಿಯ ಸೆಕ್ಷನ್ 376 (ಅತ್ಯಾಚಾರ), 354 (ಮಹಿಳೆಯರ ಗೌರವಕ್ಕೆ ಧಕ್ಕೆ) ಹಾಗೂ 506ರ (ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಜಿಂದಾಲ್, ತಮ್ಮ ಮೇಲಿನ ಆರೋಪ ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದ್ದಾರೆ. ‘ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಬದ್ಧನಾಗಿದ್ದೇನೆ. ತನಿಖೆ ಪ್ರಗತಿಯಲ್ಲಿರುವುದರಿಂದ, ಈ ಹಂತದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಕುಟುಂಬದ ಖಾಸಗಿತನವನ್ನು ಗೌರವಿಸಲು ನಾವು ವಿನಂತಿಸುತ್ತೇವೆ’ ಎಂದಿದ್ದಾರೆ.
* ದುಬೈ ಕ್ರಿಕೆಟ್ ಕ್ರೀಡಾಂಗಣದ ವಿಐಪಿ ಬಾಕ್ಸ್‌ನಲ್ಲಿ ಮೊದಲ ಬಾರಿ ಜಿಂದಾಲ್ ಅವರನ್ನು ಭೇಟಿಯಾಗಿದ್ದೆ
* ಮೊಬೈಲ್ ಸಂಖ್ಯೆ ಪರಸ್ಪರ ಹಂಚಿಕೊಂಡಿದ್ದೆವು. ನನ್ನೊಂದಿಗೆ ಗೆಳೆತನ ಬೆಳೆಸಿಕೊಂಡರು
* ಬಾಂದ್ರಾದ ಪಂಚತಾರಾ ಹೋಟೆಲ್ ಮತ್ತು ದಕ್ಷಿಣ ಮುಂಬೈನ ಜಿಂದಾಲ್ ಮ್ಯಾನ್ಶನ್‌ನಲ್ಲೂ ನಮ್ಮ ಭೇಟಿ ನಡೆದಿದೆ. ಕಾರಿನಲ್ಲೂ ಅವರೊಂದಿಗೆ ಪ್ರಯಾಣಿಸಿದ್ದೆ
* ಲೈಂಗಿಕ ದೌರ್ಜನ್ಯ ಘಟನೆಯ ಬಳಿಕ ಹಲವು ಸಲ ಸಂಪರ್ಕಿಸಲು ಪ್ರಯತ್ನಿಸಿದರೂ, ಕರೆ ಸ್ವೀಕರಿಸಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.