ಮುಂಬೈ: ಮಹಾರಾಷ್ಟ್ರದ ವರ್ಸೋವಾ - ಬಾಂದ್ರಾ ಸೀ ಲಿಂಕ್ ಅನ್ನು ವೀರ ಸಾವರ್ಕರ್ ಸೇತು ಎಂದು ಮರುನಾಮಕರಣ ಮಾಡಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವರ್ಸೋವಾ - ಬಾಂದ್ರಾ ಸೀ ಲಿಂಕ್ ಅನ್ನು ವೀರ ಸಾವರ್ಕರ್ ಸೇತು ಎಂದು ಮರುನಾಮಕರಣ ಮಾಡಲಾಗಿದೆ. ಜತೆಗೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅನ್ನು ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ನ್ಹವ ಶೇವಾ ಅಟಲ್ ಸೇತು ಎಂದೂ ಮರುನಾಮಕರಣ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಇಂದಿನ ಸಭೆಯಲ್ಲಿ ನಾವು ₹40,000 ಕೋಟಿ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಅನುಮೋದಿಸಿದ್ದೇವೆ. ಇದರಿಂದ 1.20 ಲಕ್ಷ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ನಮ್ಮ ರಾಜ್ಯದಲ್ಲಿ ಸಾಕಷ್ಟು ಸಾಮರ್ಥ್ಯ ಇರುವುದರಿಂದ ಅನೇಕ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಬರುತ್ತಿವೆ. ವಿದೇಶಿ ನೇರ ಹೂಡಿಕೆಯಲ್ಲಿ (ಎಫ್‌ಡಿಐ) ಮಹಾರಾಷ್ಟ್ರ ಮತ್ತೆ ನಂಬರ್ 1 ಆಗಿದೆ ಎಂದು ಅವರು ಹೇಳಿದ್ದಾರೆ.
17 ಕಿ.ಮೀ. ಉದ್ದದ ವರ್ಸೋವಾ–ಬಾಂದ್ರಾ ಸೀ ಲಿಂಕ್ ಪೂರ್ಣಗೊಂಡ ನಂತರ ಬಾಂದ್ರಾ–ವರ್ಲಿ ಸೀ ಲಿಂಕ್ ಜೊತೆ ಅಂಧೇರಿಗೆ ಸಂಪರ್ಕ ಒದಗಿಸುತ್ತದೆ.
ಮುಂಬೈನೊಂದಿಗೆ ನವಿಮುಂಬೈಗೆ ಸಂಪರ್ಕ ಕಲ್ಪಿಸುವ ಎಂಟಿಎಚ್‌ಎಲ್ ಯೋಜನೆ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವುದು.
ಇದನ್ನೂ ಓದಿ... ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ ಕುಣಿಗಲ್ ಶಾಸಕ ರಂಗನಾಥ್‌ಗೆ ಡಿಸಿಎಂ ಡಿಕೆಶಿ ಮೆಚ್ಚುಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.