ಹೈದರಾಬಾದ್: ಮುಂದಿನ ವರ್ಷ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಗೆಲುವಿಗೆ ಮುನುಗೋಡು ಕ್ಷೇತ್ರದ ಉಪಚುನಾವಣೆ ಹಾದಿಯಾಗಲಿದೆ ಎಂದು ಅವರು ಹೇಳಿದರು.
ತಿಂಗಳಾರಂಭದಲ್ಲಿ ಮುನುಗೋಡು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕಾಂಗ್ರೆಸ್ ನಾಯಕ ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿ, ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಬೃಹತ್ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ತೆಲಂಗಾಣದಲ್ಲಿ ಟಿಆರ್‌ಎಸ್ ಸರ್ಕಾರವನ್ನು ಕಿತ್ತೊಗೆಯುವ ಪ್ರಕ್ರಿಯೆ ಆರಂಭವಾಗಿದೆ. ತೆಲಂಗಾಣದಲ್ಲಿ ಬಿಜೆಪಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜಗೋಪಾಲ ರೆಡ್ಡಿ, ರಾಜ್ಯದ ಭವಿಷ್ಯ, ಸ್ವಾಭಿಮಾನ ಅಪಾಯದಲ್ಲಿದೆ. ಧರ್ವವನ್ನು ಉಳಿಸುವುದಕ್ಕಾಗಿ ಈ ಹೋರಾಟ ಎಂದು ಹೇಳಿದರು.
ಮುನುಗೋಡು ಕ್ಷೇತ್ರದಲ್ಲಿ ರಾಜಗೋಪಾಲ ರೆಡ್ಡಿ, ಬಿಜೆಪಿ ಅಭ್ಯರ್ಥಿಯಾಗಲಿದ್ದು, ಟಿಆರ್‌ಎಸ್ ಹಾಗೂ ಕಾಂಗ್ರೆಸ್ ಇನ್ನಷ್ಟೇ ಅಭ್ಯರ್ಥಿಯನ್ನು ಘೋಷಿಸಬೇಕಿದೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ನೇತೃತ್ವದಲ್ಲಿ ಶನಿವಾರದಂದು ಟಿಆರ್‌ಎಸ್ ರ್‍ಯಾಲಿ ಆಯೋಜಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.