ADVERTISEMENT

ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಗ್ಗೊಲೆ ಮಾಡಿದೆ: ಕಾಂಗ್ರೆಸ್‌ ಆರೋಪ

ಪಿಟಿಐ
Published 22 ಫೆಬ್ರುವರಿ 2024, 10:20 IST
Last Updated 22 ಫೆಬ್ರುವರಿ 2024, 10:20 IST
<div class="paragraphs"><p>ಕಾಂಗ್ರೆಸ್‌ </p></div>

ಕಾಂಗ್ರೆಸ್‌

   

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ‘ಎಕ್ಸ್‌’ನಿಂದ ತೆಗೆಯುವಂತೆ ಕೇಂದ್ರ ಸರ್ಕಾರ ಕೇಳಿಕೊಂಡಿದ್ದು, ಅದಕ್ಕೆ ‘ಎಕ್ಸ್‌’ ಒಪ್ಪಿಗೆ ನೀಡಿಲ್ಲ. ಇದು ಸರ್ಕಾರವು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ ಎನ್ನುವುದಕ್ಕೆ ನಿದರ್ಶನ ಎಂದು ಕಾಂಗ್ರೆಸ್‌ ಗುರುವಾರ ಟೀಕಿಸಿದೆ.

‘ರೈತರು ಕನಿಷ್ಠ ಬೆಂಬಲ ಬೆಲೆ ಕೇಳಿದರೆ ಗುಂಡು ಹಾರಿಸುತ್ತಾರೆ. ಉದ್ಯೋಗ ಕೊಡಿ ಎಂದು ಕೇಳಲು ಹೋದರೆ ನಿರಾಕರಿಸುವ ಮಾತು ಹಾಗಿರಲಿ, ಕೇಳಿಸಿಕೊಳ್ಳಲೂ ತಯಾರಿಲ್ಲ. ಮಾಜಿ ಗವರ್ನರ್‌ ಸತ್ಯ ಹೇಳಿದರೆ, ಅವರ ಮನೆಗೆ ಸಿಬಿಐ ಕಳಿಸುತ್ತಾರೆ– ಇವೆಲ್ಲ ಪ್ರಜಾಪ್ರಭುತ್ವದ ತಾಯಿ ಮಾಡುವ ಕೆಲಸವೆ?’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ. 

ADVERTISEMENT

‘ದೇಶದ ಪ್ರಮುಖ ವಿರೋಧ ಪಕ್ಷದ ಬ್ಯಾಂಕ್‌ ಖಾತೆಗಳ ವಹಿವಾಟನ್ನೇ ಸ್ಥಗಿತಗೊಳಿಸುತ್ತಾರೆ. ಅಶ್ರುವಾಯು ಶೆಲ್‌ ದಾಳಿ, ನಿಷೇಧಾಜ್ಞೆ  ಹೇರಿಕೆ, ಇಂಟರ್‌ನೆಟ್‌ ಸ್ಥಗಿತ, ಮಾಧ್ಯಮ–ಸಾಮಾಜಿಕ ಮಾಧ್ಯಮ ಹತ್ತಿಕ್ಕುವುದು... ಹೀಗೆ ಸತ್ಯದ ಧ್ವನಿಯನ್ನು ಉಡುಗಿಸುವ ಕೆಲಸಗಳನ್ನು ಪ್ರಜಾಪ್ರಭುತ್ವದ ತಾಯಿ ಮಾಡುತ್ತಾಳೆಯೇ’ ಎಂದೂ ಕೇಳಿದ್ದಾರೆ. 

‘ಎಕ್ಸ್‌’ನ ಜಾಗತಿಕ ಸರ್ಕಾರಿ ವ್ಯವಹಾರಗಳ ತಂಡವು ರೈತರ ಪ್ರತಿಭಟನೆ ಸಂಬಂಧದ ಪೋಸ್ಟ್‌ಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಟ್ಯಾಗ್‌’ ಮಾಡಿ, ‘ಇದು ಪ್ರಜಾಪ್ರಭುತ್ವದ ಕೊಲೆ ನಡೆಯುತ್ತಿದೆ ಎನ್ನುವುದನ್ನು ಹೇಳುತ್ತದೆ’ ಎಂದಿದ್ದಾರೆ. 

ಗೃಹ ಸಚಿವಾಲಯದ ಕೋರಿಕೆಯ ಮೇರೆಗೆ ರೈತರ ಪ್ರತಿಭಟನೆಗೆ ಸಂಬಂಧಿಸಿದ 177 ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ಗೆ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ (ಎಂಎಸ್‌ಪಿ) ಮತ್ತು ಕೃಷಿ ಸಾಲ ಮನ್ನಾ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪುನರಾರಂಭವಾದ ರೈತರ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ನಿನ್ನೆ (ಬುಧವಾರ) ರೈತರೊಬ್ಬರು ಹತ್ಯೆಯಾದ ನಂತರ 2 ದಿನಗಳ ಕಾಲ ಮುಷ್ಕರವನ್ನು ತಡೆಹಿಡಿಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.