ಪುದುಚೇರಿ: ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಬಹುಮತ ಕಳೆದುಕೊಂಡು ಸರ್ಕಾರ ಪತನಗೊಂಡ ಬಳಿಕ ಲೆಫ್ಟಿನೆಂಟ್ ಜನರಲ್ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಭೇಟಿಯಾದ ವಿ. ನಾರಾಯಣಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದರು.
ತದಾ ಬಳಿಕ ಪ್ರತಿಕ್ರಿಯೆ ನೀಡಿರುವ ವಿ. ನಾರಾಯಣಸ್ವಾಮಿ, ಸ್ಪೀಕರ್ ರೂಲಿಂಗ್ ತಪ್ಪಾದ ಕ್ರಮವಾಗಿದೆ ಎಂದು ಆರೋಪಿಸಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ, ಎನ್‌ಆರ್ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಪಕ್ಷಗಳು ಮೂವರು ನಾಮನಿರ್ದೇಶಿತ ಸದಸ್ಯರನ್ನು ಬಳಸಿಕೊಂಡು ನಮ್ಮ ಸರ್ಕಾರವನ್ನು ಉರುಳಿಸುವಲ್ಲಿ ಯಶಸ್ವಿಯಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಪುದುಚೇರಿ ಹಾಗೂ ಈ ದೇಶದ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸೋಮವಾರ ವಿಶ್ವಾಸಮತ ಯಾಚನೆಯಲ್ಲಿ ಬಹುಮತ ಸಾಬೀತು ಮಾಡುವಲ್ಲಿ ನಾರಾಯಣಸ್ವಾಮಿ ವಿಫಲವಾಗಿದ್ದರು. ಬಳಿಕ ರಾಜನಿವಾಸಕ್ಕೆ ತೆರಳಿ ಗವರ್ನರ್ ಭೇಟಿಯಾಗಿ ಸಿಎಂ ಹಾಗೂ ಸಂಪುಟ ದರ್ಜೆಯ ಸಚಿವರು ರಾಜೀನಾಮೆ ಸಲ್ಲಿಸಿದ್ದರು.
ಚುನಾಯಿತ ಸದಸ್ಯರು ಮಾತ್ರ ಸದನದಲ್ಲಿ ಮತ ಚಲಾಯಿಸುಬುಹುದು ಎಂಬ ನಮ್ಮ ಅಭಿಪ್ರಾಯವನ್ನು ಸ್ಪೀಕರ್ ಒಪ್ಪಲಿಲ್ಲ. ಆದ್ದರಿಂದ ನಾವು ವಿಧಾನಸಭೆಯಿಂದ ಹೊರನಡೆದು ಲೆಫ್ಟಿನೆಂಟ್ ಗವರ್ನರ್ ಭೇಟಿಯಾಗಿ ರಾಜೀನಾಮೆ ಪತ್ರವನ್ನು ನೀಡಿದ್ದೇವೆ ಎಂದು ತಿಳಿಸಿದರು.
ನಮಗೆ ಸ್ವತಂತ್ರ ಶಾಸಕರಲ್ಲದೆ, ಕಾಂಗ್ರೆಸ್, ಡಿಎಂಕೆ ಶಾಸಕರ ಬೆಂಬಲವಿದೆ. ಈಗ ರಾಜೀನಾಮೆಯನ್ನು ಸ್ವೀಕರಿಸುವುದು ಬಿಡುವುದು ಗವರ್ನರ್‌ಗೆ ಬಿಟ್ಟ ನಿರ್ಧಾರವಾಗಿದೆ ಎಂದು ಹೇಳಿದರು.
ವಿಶ್ವಾಸ ಮತಯಾಚನೆಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಶಾಸಕರ ಸಂಖ್ಯೆ 11ಕ್ಕೆ ಕುಸಿದಿತ್ತು. ವಿರೋಧ ಪಕ್ಷ 14 ಶಾಸಕರನ್ನು ಹೊಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.